ADVERTISEMENT

ಫಲಿತಾಂಶದ ನಂತರ ಬಿಜೆಪಿಯೇತರ ಸರ್ಕಾರದ ಪ್ರಧಾನಿ ಹುದ್ದೆ ನಿರ್ಧಾರ: ರಾಹುಲ್‌

ಏಜೆನ್ಸೀಸ್
Published 17 ಮೇ 2019, 13:11 IST
Last Updated 17 ಮೇ 2019, 13:11 IST
   

ನವದೆಹಲಿ: ಬಿಜೆಪಿಯೇತರ ಸರ್ಕಾರದ ಪ್ರಧಾನಿ ಹುದ್ದೆ ಕುರಿತ ತೀರ್ಮಾನವನ್ನು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ತೆಗೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ತಿಳಿಸಿದರು.

‘ಮೇ 23ಕ್ಕೆ ಜನಾಭಿಪ್ರಾಯ ದೊರೆಯಲಿದೆ. ಅವರ ನಿರ್ಧಾರ ತಿಳಿಯುವ ಮುನ್ನವೇ ಏನನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ದೇಶದ ಜನರ ತೀರ್ಪನ್ನು ನಾನು ಮುಂಚಿತವಾಗಿಯೇ ನಿರ್ಧರಿಸುವುದಿಲ್ಲ. ಫಲಿತಾಂಶ ತಿಳಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವೆವು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅತಂತ್ರ ಲೋಕಸಭೆ ನಿರ್ಮಾಣವಾದಲ್ಲಿ ಪ್ರಧಾನಿ ಹುದ್ದೆಗಾಗಿ ಕಾಂಗ್ರೆಸ್‌ ಹಠ ಹಿಡಿಯುವುದಿಲ್ಲ ಎಂದಿದ್ದ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್‌ ಅವರ ಹೇಳಿಕೆ ಕುರಿತು ರಾಹುಲ್‌ ಪ್ರತಿಕ್ರಿಯಿಸಿದರು.

ADVERTISEMENT

‘ನಾವು ಈಗಾಗಲೇ ನಮ್ಮ ಪಕ್ಷ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಕಾಂಗ್ರೆಸ್‌ಗೆ ಬಹುಮತ ದೊರೆತರೆ, ಖಂಡಿತ ಪಕ್ಷ ನಾಯಕತ್ವ ವಹಿಸಿಕೊಳ್ಳಲಿದೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಬಾರದು ಎನ್ನುವುದೇ ನಮ್ಮ ಉದ್ದೇಶ. ಹಾಗಾಗಿ ಎಲ್ಲರೂ ಒಮ್ಮತದಿಂದ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಅಜಾದ್‌ ಪಟ್ನಾದಲ್ಲಿ ಬುಧವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.