ADVERTISEMENT

FRL ಸ್ವತ್ತುಗಳ ರಕ್ಷಣೆ ಕೋರಿ ಅಮೆಜಾನ್‌ ಅರ್ಜಿ: ವಿಚಾರಣೆ ಶೀಘ್ರ –ಸುಪ್ರೀಂ

ಪಿಟಿಐ
Published 22 ಮಾರ್ಚ್ 2022, 12:34 IST
Last Updated 22 ಮಾರ್ಚ್ 2022, 12:34 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಫ್ಯೂಚರ್ ರಿಟೇಲ್‌ನ (ಎಫ್‌ಆರ್‌ಎಲ್‌) ಸ್ವತ್ತುಗಳ ರಕ್ಷಣೆ ಹಾಗೂ ರಿಲಯನ್ಸ್ ರಿಟೇಲ್‌ನಲ್ಲಿ ಎಫ್‌ಆರ್‌ಎಲ್‌ನ ವಿಲೀನಕ್ಕೆ ಸಂಬಂಧಿಸಿದ ಮಧ್ಯಸ್ಥಿಕೆ ಪ್ರಕ್ರಿಯೆ ಪುನರಾರಂಭ ಕೋರಿ ಅಮೆಜಾನ್‌ ಕಂಪನಿಯ ಅರ್ಜಿಯನ್ನು ಶೀಘ್ರವೇ ವಿಚಾರಣೆಗಾಗಿ ಪಟ್ಟಿಗೆ ಸೇರಿಸಲಾಗುವುದು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿರುವ ನ್ಯಾಯಪೀಠ, ಇ–ಕಾಮರ್ಸ್‌ ಕಂಪನಿ ಅಮೆಜಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಬೇಕಿತ್ತು.

‘ಅರ್ಜಿ ವಿಚಾರಣೆಯನ್ನು ಮಾರ್ಚ್ 23ಕ್ಕೆ ನಿಗದಿ ಮಾಡಲಾಗಿದೆ. ಆದರೆ, ನ್ಯಾಯಮೂರ್ತಿ ಕೊಹ್ಲಿ ಅವರು ಅನಿವಾರ್ಯ ಕಾರಣಗಳಿಂದ ಲಭ್ಯರಿಲ್ಲದ ಕಾರಣ ನಿಗದಿತ ದಿನಾಂಕದಂದು ಅರ್ಜಿ ವಿಚಾರಣೆ ಸಾಧ್ಯವಿಲ್ಲ’ ಎಂದು ಅಮೆಜಾನ್ ಪರ ವಕೀಲ ಗೋಪಾಲ್‌ ಸುಬ್ರಮಣಿಯಮ್ ಅವರಿಗೆ ನ್ಯಾಯಪೀಠ ತಿಳಿಸಿತು.

ADVERTISEMENT

ಆಗ, ‘ಏಪ್ರಿಲ್‌ 1ರಂದು ಅರ್ಜಿ ವಿಚಾರಣೆ ನಡೆಸಿ’ ಎಂದು ಸುಬ್ರಮಣಿಯಮ್ ಮನವಿ ಮಾಡಿದರು.

‘ಅಷ್ಟರೊಳಗಾಗಿ ನ್ಯಾಯಮೂರ್ತಿ ಕೊಹ್ಲಿ ಬರಬಹುದು. ನ್ಯಾಯಪೀಠದ ಸದಸ್ಯರು ಲಭ್ಯರಿರುವುದನ್ನು ನೋಡಿಕೊಂಡು ಆದಷ್ಟು ಶೀಘ್ರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು. ಇದು ಸಾಧ್ಯವಾಗದಿದ್ದರೆ, ಈ ಅರ್ಜಿ ವಿಚಾರಣೆಗಾಗಿ ಪ್ರತ್ಯೇಕ ಪೀಠ ರಚಿಸಲಾಗುವುದು’ ಎಂದು ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.