ಅತುಲ್ ಸುಭಾಷ್
ಸಮಸ್ತಿಪುರ(ಬಿಹಾರ): ‘ಪುತ್ರನ ಸಾವಿಗೆ ನ್ಯಾಯ ಸಿಗುವವರೆಗೂ, ಆತನ ಚಿತಾಭಸ್ಮವನ್ನು ವಿಸರ್ಜನೆ ಮಾಡುವುದಿಲ್ಲ’ ಎಂದು, ಬೆಂಗಳೂರಿನಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕಿ ಅತುಲ್ ಸುಭಾಷ್ ಅವರ ತಂದೆ ಪವನ್ ಕುಮಾರ್ ಹೇಳಿದ್ದಾರೆ.
‘ನನ್ನ ಪುತ್ರ ಅತುಲ್‌ನನ್ನು ಹಣಕ್ಕಾಗಿ ಪೀಡಿಸಿ, ಚಿತ್ರಹಿಂಸೆ ನೀಡಲಾಗಿದೆ. ಪತ್ನಿಯಿಂದಲೇ ಆತ ಅವಮಾನಕ್ಕೊಳಗಾಗಿದ್ದಾನೆ. ಆತನಿಗೆ ಕಿರುಕುಳ ನೀಡಿದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಆತನ ಆತ್ಮಕ್ಕೆ ನೆಮ್ಮದಿ ಸಿಗಲಿದೆ’ ಎಂದು ಪವನ್ ಅವರು ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಕರ್ನಾಟಕ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿರುವ ಅವರು, ತಮಗೆ ನ್ಯಾಯ ದೊರಕಿಸುವಂತೆ, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರಿಗೂ ಕಳಕಳಿಯಿಂದ ಮನವಿ ಮಾಡುವುದಾಗಿ ಹೇಳಿದ್ದಾರೆ.
ಇದೇ ವೇಳೆ, ಮೃತ ಅತುಲ್ ಮರಣಪತ್ರದಲ್ಲಿ ಉಲ್ಲೇಖಿಸಿರುವಂತೆ, ಆತನ ನಾಲ್ಕು ವರ್ಷದ ಪುತ್ರನನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರಿದ್ದಾರೆ.
34 ವರ್ಷದ ಅತುಲ್ ಸುಭಾಷ್ ಡಿಸೆಂಬರ್ 9ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ 90 ನಿಮಿಷಗಳ ವಿಡಿಯೊ ಮತ್ತು ಸುದೀರ್ಘ ಪತ್ರ ಬರೆದಿದ್ದ ಅತುಲ್, ತನ್ನ ಆತ್ಮಹತ್ಯೆಗೆ ಪತ್ನಿ ಮತ್ತು ಆಕೆಯ ತಾಯಿ ಮತ್ತು ಸಹೋದರ ಕಾರಣವೆಂದು ಹೇಳಿದ್ದರು. ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ನನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಪ್ರಕರಣ ಸಂಬಂಧ ಅತುಲ್ ಪತ್ನಿ ನಿಖಿತಾ ಸಿಂಘಾನಿಯ ಅವರನ್ನು ಹರಿಯಾಣದ ಗುರುಗ್ರಾಮದಲ್ಲಿ ಹಾಗೂ ತಾಯಿ ನಿಶಾ ಸಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಭಾನುವಾರ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.