ADVERTISEMENT

ಚೀನಾ ಅತಿಕ್ರಮಣ: ಬೆಲೆ ತೆರಲು ಸಿದ್ಧ, ಸುಳ್ಳು ಮಾತ್ರ ಹೇಳಲಾರೆ- ರಾಹುಲ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 12:43 IST
Last Updated 27 ಜುಲೈ 2020, 12:43 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ‘ನನ್ನ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾದರೂ ಚಿಂತೆ ಇಲ್ಲ. ಪೂರ್ವ ಲಡಾಖ್‌ನಲ್ಲಿ ಚೀನಾ ಅತಿಕ್ರಮಣ ಕುರಿತು ಸುಳ್ಳು ಹೇಳಲಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಭಾರತದ ಗಡಿಗೆ ಸಂಬಂಧಿಸಿದ ವಿಚಾರದಲ್ಲಿ ನಾನು ಸತ್ಯವನ್ನೇ ನುಡಿಯುತ್ತೇನೆ’ ಎಂದು ಅವರು ಸೋಮವಾರ ಟ್ವೀಟ್‌ ಮಾಡಿದ್ದಾರೆ. ಅದರೊಂದಿಗೆ ತಾವು ಮಾತನಾಡಿದ ಒಂದು ನಿಮಿಷದ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತ–ಚೀನಾ ಸಂಘರ್ಷದ ನಂತರ ಸರಣಿ ಟ್ವೀಟ್ ‌ಮೂಲಕ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವರು ನಿರಂತರವಾಗಿವಾಗ್ದಾಳಿ ನಡೆಸುತ್ತಿದ್ದಾರೆ.

ADVERTISEMENT

‘ಚೀನಾ ಸೇನೆಯು ಭಾರತದ ಗಡಿಯೊಳಗೆ ಪ್ರವೇಶಿಸಿಲ್ಲ ಎಂದು ಸುಳ್ಳು ಹೇಳುವಂತೆ ನೀವು (ಮೋದಿ) ನನ್ನ ಮೇಲೆ ಎಷ್ಟೇ ಒತ್ತಡ ಹೇರಿದರೂ ನಾನು ಸುಳ್ಳು ಹೇಳಲಾರೆ. ನನ್ನ ರಾಜಕೀಯ ಭವಿಷ್ಯ ಹಾಳಾಗುವುದಾದರೆ ಆಗಲಿ. ನಾನು ಅದಕ್ಕಾಗಿ ಚಿಂತಿಸುವುದಿಲ್ಲ.ಒಬ್ಬ ಭಾರತೀಯನಾಗಿ ಈ ದೇಶ ಮತ್ತು ದೇಶದ ಜನರ ಹಿತ ನನಗೆ ಮುಖ್ಯ’ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಅವರು ಚೀನಾ ಅತಿಕ್ರಮಣದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ನನ್ನಿಂದಲೂಸುಳ್ಳು ಹೇಳಲು ಅವರು ಬಯಸುತ್ತಾರೆ. ನಿಜ ಹೇಳಬೇಕೆಂದರೆ, ನನ್ನ ರಕ್ತ ಕುದಿಯುತ್ತದೆ. ಬೇರೆ ರಾಷ್ಟ್ರಗಳು ನಮ್ಮ ಗಡಿಯೊಳಗೆ ನುಸುಳಲು ಹೇಗೆ ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ. ‘

‘ಜನರಿಂದ ಸತ್ಯವನ್ನು ಮರೆಮಾಚುವುದು ಕೂಡ ರಾಷ್ಟ್ರ ವಿರೋಧಿ ಕೃತ್ಯ. ಗಡಿಯಲ್ಲಿ ನಡೆದಿರುವ ಸತ್ಯ ಘಟನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಿಳಿಸುವುದು ರಾಷ್ಟ್ರಪ್ರೇಮ. ಹಾಗಾಗಿ ನಾನು ಸುಳ್ಳು ಹೇಳಲಾರೆ. ಇದಕ್ಕಾಗಿ ಯಾವ ಬೆಲೆಯನ್ನಾದರೂ ತೆರಲು ಸಿದ್ಧ’ ಎಂದು ರಾಹುಲ್‌ ಹೇಳಿದ್ದಾರೆ.

‘1962ರಲ್ಲಿ ಕಾಂಗ್ರೆಸ್‌ ಸರ್ಕಾರ ಮಾಡಿದ ಪಾಪವನ್ನು ರಾಹುಲ್‌ ಗಾಂಧಿ ಅವರು ತೊಳೆದುಕೊಳ್ಳುತ್ತಿದ್ದಾರೆ’ ಎಂದು ಬಿಜೆಪಿತಿರುಗೇಟು ನೀಡಿದೆ. ಮೋದಿ ಅವರ ವಿನಾಶಕ್ಕೆ ಹೊರಟಿರುವ ರಾಷ್ಟ್ರೀಯ ಪಕ್ಷವೊಂದು ತಾನೇ ಸರ್ವನಾಶ ಆಗುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.