ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಲಯ ನೀಡಿರುವ ತೀರ್ಪು, ಭಾರತದ ಹಲವರ ಮೇಲೆ ಬೇಹುಗಾರಿಕೆ ನಡೆದಿರುವುದನ್ನು ಸಾಬೀತುಪಡಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಅಮೆರಿಕದ ನ್ಯಾಯಾಲಯವು ಪೆಗಾಸಸ್ ಕುತಂತ್ರಾಂಶಕ್ಕೆ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಅನ್ನು ಹೊಣೆಗಾರನನ್ನಾಗಿ ಮಾಡಿದೆ. ಅಮೆರಿಕದ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಉಲ್ಲೇಖಿಸಿರುವ ಸುರ್ಜೇವಾಲಾ, ‘ಈ ತೀರ್ಪಿನ ಹಿನ್ನೆಲೆಯಲ್ಲಿ ಪೆಗಾಸಸ್ ಗೂಢಚರ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಹೆಚ್ಚಿನ ತನಿಖೆ ನಡೆಸಲಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಪೆಗಾಸಸ್ ಕುತಂತ್ರಾಂಶ ಬಳಸಿ ಭಾರತದ 300 ಮಂದಿಯ ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ಗುರಿಯಾಗಿಸಿಕೊಂಡು ಗೂಢಚರ್ಯೆ ನಡೆದಿರುವುದನ್ನು ಈ ತೀರ್ಪು ಸಾಬೀತುಪಡಿಸಿದೆ. ಆ 300 ಮಂದಿ ಯಾರು ಎಂಬ ಪ್ರಶ್ನೆಗೆ ನರೇಂದ್ರ ಮೋದಿ ಸರ್ಕಾರ ಈಗ ಉತ್ತರಿಸಬೇಕಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸರ್ಕಾರ ಗುರಿಯಾಗಿಸಿಕೊಂಡ ಇಬ್ಬರು ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷಗಳ ಮೂವರು ನಾಯಕರು ಯಾರು? ಪತ್ರಕರ್ತರು ಮತ್ತು ಉದ್ಯಮಿಗಳು ಯಾರು? ಬಿಜೆಪಿ ಸರ್ಕಾರ ಮತ್ತು ಏಜೆನ್ಸಿಗಳು ಬೇಹುಗಾರಿಕೆ ನಡೆಸಿ ಯಾವೆಲ್ಲಾ ಮಾಹಿತಿಗಳನ್ನು ಕಲೆಹಾಕಿವೆ? ಕುತಂತ್ರಾಂಶವನ್ನು ಯಾವ ರೀತಿ ಬಳಸಲಾಯಿತು ಮತ್ತು ಆದರಿಂದ ಆದ ಪರಿಣಾಮಗಳೇನು?’ ಎಂದು ಹೇಳಿದ್ದಾರೆ.
‘ಮೆಟಾ ಸಂಸ್ಥೆ ಮತ್ತು ಎನ್‌ಎಸ್‌ಒ ನಡುವಿನ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ಗಮನಿಸುತ್ತದೆಯೇ, ಪೆಗಾಸಸ್ ಗೂಢಚರ್ಯೆ ಪ್ರಕರಣದ ಕುರಿತು ತಾಂತ್ರಿಕ ತಜ್ಞರ ಸಮಿತಿಯು 2021–22ರಲ್ಲಿ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಮುಂದಾಗುವುದೇ’ ಎಂದೂ ಪ್ರಶ್ನಿಸಿದ್ದಾರೆ.
ಪೆಗಾಸಸ್ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಲು 300 ಮಂದಿಯ ಹೆಸರುಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮೆಟಾ ಸಂಸ್ಥೆಗೆ ಸೂಚಿಸುವುದೇ?ರಣದೀಪ್ ಸುರ್ಜೇವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.