ADVERTISEMENT

ಆಕೆಯನ್ನು ವಿವಾಹವಾಗುವಿರಾ? ಅತ್ಯಾಚಾರ ಆರೋಪಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಆಶಿಶ್ ತ್ರಿಪಾಠಿ
Published 1 ಮಾರ್ಚ್ 2021, 11:43 IST
Last Updated 1 ಮಾರ್ಚ್ 2021, 11:43 IST
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ)
ಸುಪ್ರೀಂ ಕೋರ್ಟ್‌ (ಪಿಟಿಐ ಚಿತ್ರ)   

ನವದೆಹಲಿ: 'ನೀವು ಆಕೆಯನ್ನು ಮದುವೆಯಾಗುವಿರಾ...?' ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದ ಆರೋಪ ಹೊತ್ತಿರುವ ಮಹಾರಾಷ್ಟ್ರದ ಸರ್ಕಾರಿ ನೌಕರರೊಬ್ಬರನ್ನು ಸುಪ್ರೀಂ ಕೋರ್ಟ್‌ ಸೋಮವಾರ ಕೇಳಿದ ಪ್ರಶ್ನೆ ಇದು.

ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್.ಎ ಬೋಬಡೆ ಅವರಿದ್ದ ಪೀಠವು ಅರ್ಜಿದಾರ ಮೋಹಿತ್‌ ಶುಭಾಷ್‌ ಚೌಹಾಣ್‌ ಅವರಿಗೆ ಪ್ರಶ್ನೆ ಮಾಡಿತು.

'ನೀವು ಸರ್ಕಾರಿ ಸೇವಕ ಎಂಬುದು ನಿಮಗೆ ಗೊತ್ತಿತ್ತು. ಎಳೆ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯವೆಸಗುವ ಮುನ್ನ ನೀವು ಯೋಚನೆ ಮಾಡಬೇಕಿತ್ತು. ನಿಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿಲ್ಲ. ನೀವು ಬಯಸಿದರೆ ನಮಗೆ ತಿಳಿಸಿ. ಇಲ್ಲದಿದ್ದರೆ, ಆಕೆಯನ್ನು ಮದುವೆಯಾಗುವಂತೆ ಕೋರ್ಟ್‌ ಒತ್ತಾಯಿಸುತ್ತಿದೆ ಎಂದು ನೀವು ಹೇಳುತ್ತೀರಿ,' ಎಂದು ಪೀಠ ಹೇಳಿತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿದಾರನ ಅಭಿಪ್ರಾಯ ತಿಳಿಯಲು ಬಯಸುವುದಾಗಿ ಹೇಳಿ, ಕಾಲವಕಾಶ ಕೋರಿದರು.

ಅತ್ಯಾಚಾರ ಪ್ರಕರಣದಲ್ಲಿ ಸೆಷನ್ಸ್‌ ಕೋರ್ಟ್‌ 2020ರ ಜನವರಿ 6ರಂದು ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ನ ಫೆ. 5ರ ಅದೇಶವನ್ನು ಮಹಾರಾಷ್ಟ್ರ ವಿದ್ಯುತ್‌ ನಿಗಮದ ನೌಕರ, 23 ವರ್ಷದ ಆರೋಪಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಆರೋಪಿ ವಿರುದ್ಧ 2019ರ ಡಿ. 17ರಂದು ಮಹಾರಾಷ್ಟ್ರದ ಜಲಗಾವ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಏನಿದು ಘಟನೆ

2014-15ರಲ್ಲಿ ತಾವು 9ನೇ ತರಗತಿಯಲ್ಲಿ ಓದುತ್ತಿರುವಾಗ ಆರೋಪಿ ತಮ್ಮನ್ನು ಹಿಂಬಾಲಿಸುತ್ತಿದ್ದುದ್ದಾಗಿಯೂ, ಒಂದು ದಿನ ತಮ್ಮ ಮನೆ ಪ್ರವೇಶ ಮಾಡಿ ಅತ್ಯಾಚಾರ ಮಾಡಿದ್ದಾಗಿಯೂ ಸಂತ್ರಸ್ತೆ ಆರೋಪಿಸಿದ್ದಾರೆ. ಅಲ್ಲದೆ, ನಡೆದಿದ್ದನ್ನು ಎಲ್ಲಿಯಾದರೂ ಹೇಳಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಲಾಗಿತ್ತು. ಘಟನೆ ನಂತರವೂ ಆರೋಪಿಯ ದೌರ್ಜನ್ಯ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ.

ಈ ಬಗ್ಗೆ 2018ರ ಜೂನ್‌ನಲ್ಲಿ ದೂರು ದಾಖಲಿಸಿದಾಗ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಆರೋಪಿಯಿಂದ ಭರವಸೆ ಸಿಕ್ಕಿತ್ತು. ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಸಂತ್ರಸ್ತೆ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.