ADVERTISEMENT

ನರ್ಸ್‌ಗಳ ಸಹಾಯವಿಲ್ಲದೆ ಕೋವಿಡ್-19 ವಿರುದ್ಧದ ಹೋರಾಟ ಅಸಾಧ್ಯ: ಸಚಿವ ಹರ್ಷವರ್ಧನ್

ಪಿಟಿಐ
Published 12 ಮೇ 2020, 16:44 IST
Last Updated 12 ಮೇ 2020, 16:44 IST
   

ನವದೆಹಲಿ:ಕೋವಿಡ್-19 ವಿರುದ್ಧ ಹೋರಾಡುತ್ತಿರುವ ನರ್ಸ್, ಆರೋಗ್ಯ ಕಾರ್ಯಕರ್ತರ ಕಾರ್ಯವನ್ನುಶ್ಲಾಘಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಆರೋಗ್ಯ ಕಾರ್ಯಕರ್ತರು ನಮ್ಮಆರೋಗ್ಯ ವ್ಯವಸ್ಥೆಯ ದೃಢ ಮತ್ತು ಮುಖ್ಯ ಆಧಾರ ಸ್ತಂಭ ಎಂದು ಹೇಳಿದ್ದಾರೆ.

ದಾದಿಯರ ದಿನವಾದ ಇಂದು ನರ್ಸ್‌ಗಳ ಕಾರ್ಯವನ್ನು ಪ್ರಶಂಸಿಸಿದ ಅವರು ನರ್ಸ್ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಹಾಯವಿಲ್ಲದೆ ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಚಿಕಿತ್ಸೆ ನೀಡುತ್ತಿರುವ ನರ್ಸ್‌ಗಳು ಕೂಡಾ ರೋಗದಿಂದ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಬಗ್ಗೆ ಜಾಗ್ರತೆ ವಹಿಸಬೇಕು. ಈ ಮೂಲಕ ಅವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವುದರೊಂದಿಗೆ ಇತರರಿಗೂ ಉತ್ತಮ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ.

ADVERTISEMENT

ಕೋವಿಡ್-19 ರೋಗ ಹರಡುತ್ತಿರುವ ಹೊತ್ತಲ್ಲಿ ನರ್ಸ್‌ಗಳು ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ.ಪುಣೆಯ ನರ್ಸ್ ಜ್ಯೋತಿ ವಿಥಲ್ ರಕ್ಷಾ, ಅನಿತಾ ಗೋವಿಂದರಾವ್, ಜಿಲ್‌ಮಿಲ್ ಇಎಸ್‌ಐ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮಾರ್ಗರೆಟ್ ಇತ್ತೀಚೆಗೆ ಸಾವಿಗೀಡಾಗಿದ್ದರು.ಅವರಿಗೆ ನನ್ನ ಸಂತಾಪಗಳು ಎಂದು ಸಚಿವರು ಹೇಳಿದ್ದಾರೆ.

ನಾನು ನಿಮ್ಮೊಂದಿಗೆ ಇದ್ದೇನೆ ಮತ್ತು ರೋಗದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನಿಮ್ಮ ನೈತಿಕ ಸ್ಥೈರ್ಯ ಹೆಚ್ಚುತ್ತಿರಲಿ ಮತ್ತು ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಅಗತ್ಯವಾದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.

ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಹಿಂಸೆಗಳಿಂದ ರಕ್ಷಿಸಲು ಸುಗ್ರೀವಾಜ್ಞೆಯೊಂದನ್ನು ತರಲಾಗುವುದು. ವೈದ್ಯರು, ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಯಕರ್ತರ ವಿರುದ್ಧ ಯಾವುದೇ ರೀತಿಯ ಹಿಂಸಾಚಾರ ಕೃತ್ಯಗಳನ್ನು ತಡೆಯುವುದಕ್ಕಾಗಿ ಈ ಸುಗ್ರೀವಾಜ್ಞೆ ಸಹಾಯ ಮಾಡಲಿದೆ.

ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗಾಗಿರುವ ವಿಮಾ ಯೋಜನೆಗೆ ಅನುಮತಿ ನೀಡಿದೆ. ಈ ಮೂಲಕ 90 ದಿನಗಳಿಗೆ 50 ಲಕ್ಷದ ವಿಮೆ ನೀಡಲಿದೆ. ಒಟ್ಟು 22.12 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಇದು ಲಭಿಸಲಿದೆ. ಕೋವಿಡ್ ರೋಗಿಗಳೊಂದಿಗೆ ನೇರ ಸಂಪರ್ಕ ಇರಿಸುವ ಮತ್ತು ಕಮ್ಯುನಿಟಿ ಆರೋಗ್ಯ ಕಾರ್ಯಕರ್ತರು ಇದರ ಫಲಾನುಭವಿಗಳಾಗಲಿದ್ದಾರೆ.ಕೋವಿಡ್-19ನಿಂದಾಗಿ ಪ್ರಾಣ ಅಪಾಯ ಬಂದರೂ ಈ ವಿಮೆ ಲಭಿಸಲಿದೆ.

ದೆಹಲಿಯ ಏಮ್ಸ್ ಮತ್ತು ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ ಆಯೋಜಿಸುತ್ತಿರುವ ವಿವಿಧ ವೆಬಿನಾರ್‌ಗಳ ಪ್ರಯೋಜನವನ್ನು ದಾದಿಯರು ಪಡೆಯಬೇಕು ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.