ADVERTISEMENT

ಸುಶಿಕ್ಷತೆ ಎಂಬ ಕಾರಣಕ್ಕೆ ಉದ್ಯೋಗಕ್ಕೆ ಒತ್ತಾಯಿಸುವಂತಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 15:31 IST
Last Updated 11 ಜೂನ್ 2022, 15:31 IST
.
.   

ಮುಂಬೈ (ಪಿಟಿಐ):ಮಹಿಳೆ ಸುಶಿಕ್ಷಿತೆ ಎಂಬ ಕಾರಣಕ್ಕೆ ಕೆಲಸ ಮಾಡಲೇಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತನ್ನ ಪರಿತ್ಯಕ್ತ ಪತ್ನಿಗೆ ಜೀವನಾಂಶ ಪಾವತಿಸಲು ನಿರ್ದೇಶಿಸಿದ ನ್ಯಾಯಾಲಯದ ಆದೇಶದ ವಿರುದ್ಧ ವ್ಯಕ್ತಿಯ ಮನವಿ ಆಲಿಸಿದ ಕೋರ್ಟ್ ಈ ರೀತಿ ಹೇಳಿದೆ.

ಪುಣೆಯ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಸದಸ್ಯ ಪೀಠ,‘‌ಶೈಕ್ಷಣಿಕ ಪದವಿ ಪಡೆದಿದ್ದರೂ ಕೆಲಸ ಮಾಡುವ ಅಥವಾ ಮನೆಯಲ್ಲಿ ಉಳಿಯುವ ಆಯ್ಕೆ ಆಕೆಗೆ ಬಿಟ್ಟಿದ್ದು. ಮಹಿಳೆ (ಆರ್ಥಿಕವಾಗಿ) ಕೊಡುಗೆ ನೀಡಬೇಕು ಎಂಬುದನ್ನು ಸಮಾಜ ಇನ್ನೂ ಒಪ್ಪಿಕೊಂಡಿಲ್ಲ. ಕೆಲಸ ಮಾಡುವುದು ಆಕೆಯ ಆಯ್ಕೆ. ಉದ್ಯೋಗಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ.ಪದವೀಧರೆ ಎಂಬ ಕಾರಣಕ್ಕೆ ಮನೆಯಲ್ಲಿ ಇರಬಾರದು ಎನ್ನುವಂತಿಲ್ಲ’ ಎಂದು ಡಾಂಗ್ರೆ ಹೇಳಿದರು.

ADVERTISEMENT

‘ಇಂದು ನಾನು ನ್ಯಾಯಮೂರ್ತಿ. ನಾಳೆ, ನಾನು ಮನೆಯಲ್ಲಿ ಇರಬಹುದು ಎಂದು ಭಾವಿಸೋಣ. ಆಗ ನ್ಯಾಯಮೂರ್ತಿಯಾಗಲು ಅರ್ಹನಾಗಿರುವುದರಿಂದ ಮನೆಯಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಹೇಳುತ್ತೀರಾ’ ಎಂದು ಪ್ರಶ್ನಿಸಿದರು.

ವ್ಯಕ್ತಿ ಪರ ವಾದಿಸಿದ ವಕೀಲರು, ‘ಕೌಟುಂಬಿಕ ನ್ಯಾಯಾಲಯ ತನ್ನ ಕಕ್ಷಿದಾರನಿಗೆ ಜೀವನಾಂಶ ಪಾವತಿಸಲು ನಿರ್ದೇಶಿಸಿರುವುದು ಸರಿಯಲ್ಲ. ಏಕೆಂದರೆ ಆಕೆ ಶಿಕ್ಷಣ ಪಡೆದಿದ್ದು, ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಳು‍’ ಎಂದರು.

ಪತ್ನಿಗೆ ಪ್ರತಿ ತಿಂಗಳು ₹ 5 ಸಾವಿರ ಮತ್ತು ತನ್ನ 13 ವರ್ಷದ ಮಗಳ ಪೋಷಣೆಗೆ ₹ 7 ಸಾವಿರ ನೀಡುವಂತೆಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.