ಚಂಡೀಗಢ: ಕಾಣೆಯಾಗಿದ್ದ ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯುಯೆನ್ಸರ್ ಕಾಂಚನ ಕುಮಾರಿ (30) ಮೃತದೇಹವು ಪಂಜಾಬ್‌ನ ಭಟಿಂಡಾ ಜಿಲ್ಲೆಯ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಕೆಟ್ಟು ಹೋದ ಕಾರೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಕಮಲ್ ಕೌರ್ ಭಾಭಿ ಎಂದೇ ಜನಪ್ರಿಯತೆ ಹೊಂದಿದ್ದ ಅವರು, ಇನ್‌ಸ್ಟಾಗ್ರಾಮ್‌ನಲ್ಲಿ 3.84 ಲಕ್ಷ ಹಿಂಬಾಲಕರನ್ನು ಹೊಂದಿದ್ದರು. 2.36 ಲಕ್ಷ ಚಂದಾದಾರಿಕೆ ಹೊಂದಿದ್ದ ‘ಫನ್ನಿ ಭಾಭಿ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಅವರು ನಡೆಸುತ್ತಿದ್ದರು.
ಅವರು ಲೂಧಿಯಾನದವರು. ಜೂನ್ 9ರಂದು ಪ್ರಚಾರ ಕಾರ್ಯಕ್ರಮಕ್ಕೆ ಹೋಗುವುದಾಗಿ ತಾಯಿ ಹೇಳಿ ಮನೆಯಿಂದ ತೆರಳಿದ್ದ ಅವರನ್ನು ಬಳಿಕ ಕುಟುಂಬಸ್ಥರ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಿಂದ ದುರ್ವಾಸನೆ ಬರುತ್ತಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ಶವ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಗಳು ಆಕೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಭಟಿಂಡಾ ಪೊಲೀಸ್ ವರಿಷ್ಠಾಧಿಕಾರಿ ನರಿಂದರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.