ADVERTISEMENT

ಮತಾಂತರ ನಂತರ ಬೆದರಿಕೆ, ಬೆನ್ನುಬಿದ್ದ ಮಾಧ್ಯಮ: ರಕ್ಷಣೆ ಕೋರಿ ಯುವತಿ ಕೋರ್ಟ್‌ಗೆ

ಪಿಟಿಐ
Published 29 ಜೂನ್ 2021, 10:24 IST
Last Updated 29 ಜೂನ್ 2021, 10:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದ ನಂತರ ತನಗೂ, ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಬಂದಿರುವುದಾಗಿಯೂ, ಉತ್ತರ ಪ್ರದೇಶದ ಪೊಲೀಸರು, ಮಾಧ್ಯಮಗಳು ಮತ್ತು ಕೆಲ ಗುಂಪುಗಳು ತಮ್ಮ ಬೆನ್ನುಬಿದ್ದಿರುವುದಾಗಿಯೂ ಆರೋಪಿಸಿರುವ ಮಹಿಳೆಯೊಬ್ಬರು, ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಉದ್ಯೋಗ ನಿಮಿತ್ತ ದೆಹಲಿಯಲ್ಲಿ ನೆಲೆಸಿರುವ ಮಹಿಳೆಯು ಉತ್ತರ ಪ್ರದೇಶದ ಶಹಜಹಾನ್‌ಪುರದವರಾಗಿದ್ದು, ತನ್ನ ಮತ್ತು ತನ್ನ ಕುಟುಂಬಕ್ಕೆ ಸುರಕ್ಷತೆ ನೀಡಬೇಕೆಂದೂ, ತನ್ನ ಖಾಸಗಿತನವನ್ನು ರಕ್ಷಿಸಬೇಕಾಗಿಯೂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

‘ಮತಾಂತರವಾದಾಗಿನಿಂದಲೂ ನನ್ನನ್ನು ಮತ್ತು ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ವಿಷಯವನ್ನು ಪ್ರಕಟಿಸಲಾಗುತ್ತಿದೆ. ಅದನ್ನು ತಕ್ಷಣವೇ ನಿಲ್ಲಿಸಬೇಕು,’ ಎಂದೂ ಆಕೆ ಕೋರಿದ್ದಾರೆ.

ADVERTISEMENT

"ಅರ್ಜಿದಾರರು (ಮಹಿಳೆ) ವಯಸ್ಕರು ಮತ್ತು ಆಕೆ ತನ್ನ ನಂಬುಗೆಗಳನ್ನು ಪಾಲಿಸಲು ಸಂವಿಧಾನಿಕ ಹಕ್ಕು ಪಡೆದುಕೊಂಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿದಂತೆ ಆಕೆ ಮಾಡಿಕೊಳ್ಳುವ ಆಯ್ಕೆಯನ್ನೇ ಗುರಿಯಾಗಿಸಿಕೊಂಡು ಆಕೆಗೆ ಕಿರುಕುಳ ನೀಡಬಾರದು,‘ ಎಂದು ಅರ್ಜಿಯಲ್ಲಿ ವಕೀಲರು ವಾದಿಸಿದ್ದಾರೆ.

ಅರ್ಜಿಯು ಬುಧವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಮಹಿಳೆಯನ್ನು ಪ್ರತಿನಿಧಿಸುತ್ತಿರುವ ವಕೀಲ ಕಮಲೇಶ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ರೇಣು ಗಂಗ್ವಾರ್ ಅಲಿಯಾಸ್ ಆಯೆಷಾ ಅಲ್ವಿ ಅವರು ಮೇ 27 ರಂದು ದೆಹಲಿಯಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಆದರೆ, ಜೂನ್ 23ರಂದು ಶಹಜಹಾನ್ಪುರಕ್ಕೆ ಬಂದಾಗಿನಿಂದ ಮಾಧ್ಯಮಗಳು ಅವರ ಹಿಂದೆ ಬಿದ್ದಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನಿರಾಕರಣೆ ಮಾಡಿದಾಗ್ಯೂ, ಭೇಟಿಗೆ ಸಮಯ ನೀಡುವಂತೆ ಮಾಧ್ಯಮಗಳು ಬೆಂಬಿಡದೇ ಕಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ನನ್ನ ಅನುಮತಿಯಿಲ್ಲದೆ ನಾನಿದ್ದ ಜಾಗಕ್ಕೆ ಬಂದ ಮಾಧ್ಯಮದ ಕೆಲ ವರದಿಗಾರರು ನನ್ನ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ. ಅಂದಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ‘ಮತಾಂತರಗೊಂಡಿರುವ ಸುದ್ದಿ ಬಿತ್ತರಿಸುವುದಾಗಿಯೂ, ಹಣ ನೀಡುವಂತೆಯೂ,‍ ಪ್ರಕರಣ ದಾಖಲಿಸುವುದಾಗಿಯು‘ ಬೆದರಿಕೆ ಹಾಕಲಾಗುತ್ತಿದೆ ಎಂದು ಯುವತಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.