ADVERTISEMENT

ಶಬರಿಗಿರಿ: ಭಕ್ತರ ಅಡ್ಡಿ, ಮರಳಿದ ಮಹಿಳೆಯರು

ಅಯ್ಯಪ್ಪ ದರ್ಶನಕ್ಕೆ ಮಹಿಳೆಯರ ಹರಸಾಹಸ, ದಿನಕ್ಕೊಂದು ನಾಟಕೀಯ ಬೆಳವಣಿಗೆ

ಪಿಟಿಐ
Published 24 ಡಿಸೆಂಬರ್ 2018, 19:54 IST
Last Updated 24 ಡಿಸೆಂಬರ್ 2018, 19:54 IST
ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಸೋಮವಾರ ಯತ್ನಿಸಿ ಅಸ್ವಸ್ಥರಾದ ಕನಕದುರ್ಗಾ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು – ಎಎಫ್‌ಪಿ ಚಿತ್ರ
ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಸೋಮವಾರ ಯತ್ನಿಸಿ ಅಸ್ವಸ್ಥರಾದ ಕನಕದುರ್ಗಾ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು – ಎಎಫ್‌ಪಿ ಚಿತ್ರ   

ಶಬರಿಮಲೆ: ವಾರ್ಷಿಕ ಪೂಜೆಯ ಮೊದಲ ಹಂತ ಗುರುವಾರ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಶಬರಿಗಿರಿ ಮತ್ತೆ ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹೋಗಲು ಸೋಮವಾರ ಬೆಟ್ಟ ಹತ್ತಿದ್ದ ಇಬ್ಬರು ಮಹಿಳೆಯರನ್ನು ಭಕ್ತರು ತೀವ್ರ ಪ್ರತಿರೋಧ ಒಡ್ಡಿ ಬಲವಂತವಾಗಿ ಮರಳಿ ಕಳಿಸಿದರು.

ಅಂದಾಜು 40 ವರ್ಷ ಆಸುಪಾಸಿನಲ್ಲಿರುವ ಮಲಪ್ಪುರಂ ನಿವಾಸಿ ಬಿಂದು ಮತ್ತು ಕೋಯಿಕ್ಕೋಡ್‌ನ ಕನಕದುರ್ಗಾ ಬೆಳಿಗ್ಗೆ 4 ಗಂಟೆಗೆ ಪಂಪಾಕ್ಕೆ ಬಂದಿದ್ದರು.

ADVERTISEMENT

ಪೊಲೀಸ್‌ ಭದ್ರತೆಯಲ್ಲಿ ಬೆಟ್ಟ ಹತ್ತಲು ಮುಂದಾದರು. ಸನ್ನಿಧಾನದಿಂದ ಒಂದು ಕಿಲೋ ಮೀಟರ್‌ ದೂರದಲ್ಲಿ ಬೀಡುಬಿಟ್ಟಿದ್ದ ಗುಂಪುಗಳು ಇಬ್ಬರನ್ನೂ ಅಡ್ಡಗಟ್ಟಿದವು.

ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪೊಲೀಸರು ಪ್ರಯತ್ನಪಟ್ಟ ಕಾರಣ ಪರಿಸ್ಥಿತಿಉದ್ವಿಗ್ನಗೊಂಡಿತು. ಭಕ್ತರ ಪ್ರತಿಭಟನೆ ತೀವ್ರಗೊಂಡ ಕಾರಣ ನೂಕು ನುಗ್ಗಲು ಉಂಟಾಯಿತು.

ತಮಿಳುನಾಡಿನ ‘ಮನ್ನಿಧಿ’ ಸಂಘಟನೆಯ 11 ಮಹಿಳೆಯರು ಭಾನುವಾರ ದೇವಸ್ಥಾನಕ್ಕೆ ಹೋಗಲು ನಡೆಸಿದ ಯತ್ನವನ್ನು ಭಕ್ತರು ವಿಫಲಗೊಳಿಸಿದ್ದರು.

‘ಕೋರ್ಟ್ ತೀರ್ಪು ಜಾರಿಯಾಗಲಿ’

‘ನಾವೇನೂ ತಪ್ಪು ಮಾಡಿಲ್ಲ. ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಬೇಕು. ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನಗೊಳಿಸಬೇಕು ಎನ್ನುವುದು ನಮ್ಮ ಬೇಡಿಕೆ’ ಎಂದು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ.

‘ಬಲವಂತವಾಗಿ ಪೊಲೀಸರೇ ನಮ್ಮನ್ನು ತಡೆದರು. ನಾವೇನೂ ಪೊಲೀಸ್‌ ಭದ್ರತೆ ಕೇಳಿಲ್ಲ, ಆದರೆ, ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿ’ ಎಂದು ಬಿಂದು ಹೇಳಿದ್ದಾರೆ.

ಅಸ್ವಸ್ಥರಾದ ಮಹಿಳೆ

ಅಸ್ವಸ್ಥರಾದ ಕನಕದುರ್ಗಾ ಪ್ರತಿಭಟನಾ ಸ್ಥಳದಲ್ಲಿಯೇ ಕುಳಿತರು. ಪೊಲೀಸರು ಇಬ್ಬರಿಗೂ ಮರಳಿ ಹೋಗುವಂತೆ ಸಲಹೆ ನೀಡಿದರು.

ಸುಮಾರು 4.5 ಕಿ.ಮೀ. ದೂರದವರೆಗೆ ಚಾರಣ ನಡೆಸಿದ್ದ ಈ ಮಹಿಳೆಯರನ್ನು ಕೊನೆಗೆ ಪೊಲೀಸರೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು.

‘ಇದು ದೇವಸ್ಥಾನಕ್ಕೆ ತಲುಪಲು ಹೂಡಿರುವ ತಂತ್ರ. ಅವಳಿಗೆ ಏನೂ ಆಗಿಲ್ಲ’ ಎಂದು ಬಿಂದು ಹೇಳಿದರು. ಈ ನಡುವೆ ಬಿಜೆಪಿ ಕಾರ್ಯಕರ್ತರು ಮಹಿಳೆಯರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಕೊನೆ ಹಂತಕ್ಕೆ ಪೂಜೆ: ಭಕ್ತರ ಸಂಖ್ಯೆ ಹೆಚ್ಚಳ

ವಾರ್ಷಿಕ ಪೂಜೆಗಾಗಿ ನವೆಂಬರ್‌ 16 ರಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಡಿಸೆಂಬರ್‌ 27ಕ್ಕೆ ಪೂಜೆಯ ಮೊದಲ ಹಂತ ಪೂರ್ಣಗಳ್ಳಲಿದೆ.

ಸಂಕ್ರಮಣ ಮತ್ತು ಮಕರಜ್ಯೋತಿ ದರ್ಶನಕ್ಕಾಗಿ ಕೆಲವು ದಿನಗಳಿಂದ ಅಯ್ಯಪ್ಪ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.