ADVERTISEMENT

ಪಹಲ್ಗಾಮ್‌ ದಾಳಿ ವೇಳೆ ಮಹಿಳೆಯರು ಉಗ್ರರ ವಿರುದ್ಧ ಹೋರಾಡಬೇಕಿತ್ತು: ಬಿಜೆಪಿ ನಾಯಕ

​ಪ್ರಜಾವಾಣಿ ವಾರ್ತೆ
Published 25 ಮೇ 2025, 16:07 IST
Last Updated 25 ಮೇ 2025, 16:07 IST
<div class="paragraphs"><p>ಮಮೋದಿ ಅವರ ಜೊತೆ&nbsp;ರಾಮಚಂದ್ರ ಜಾಂಗಡಾ</p></div>

ಮಮೋದಿ ಅವರ ಜೊತೆ ರಾಮಚಂದ್ರ ಜಾಂಗಡಾ

   

ಸಂಗ್ರಹ ಚಿತ್ರ

ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವಿಧವೆಯರಾದವರು ಹೋರಾಟದ ಕೆಚ್ಚನ್ನು ತೋರಿಸಿಲ್ಲ ಎಂದು ರಾಜ್ಯಸಭಾ ಸದಸ್ಯ ರಾಮಚಂದ್ರ ಜಾಂಗಡಾ ಅವರು ಹೇಳಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ADVERTISEMENT

ಜಾಂಗಡಾ ಅವರನ್ನು ಬಿಜೆಪಿಯಿಂದ ಹೊರಹಾಕಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಬಿಜೆಪಿಯ ನಾಯಕತ್ವ ಹಾಗೂ ಪ್ರಧಾನಿ ಮೋದಿ ಅವರು ಈ ಹೇಳಿಕೆಯ ವಿಚಾರವಾಗಿ ಮೌನ ತಾಳಿರುವುದನ್ನು ಜಾಂಗಡಾ ಹೇಳಿಕೆಗೆ ‘ಪರೋಕ್ಷ ಸಮ್ಮತಿ’ ಎಂದು ಭಾವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಪಹಲ್ಗಾಮ್‌ ದಾಳಿಯ ಸಂತ್ರಸ್ತರನ್ನು ಮತ್ತು ಸಶಸ್ತ್ರ ಪಡೆಗಳನ್ನು ಅವಹೇಳನ ಮಾಡಲು ಬಿಜೆಪಿಯವರು ತಮ್ಮ ನಡುವೆಯೇ ಸ್ಪರ್ಧೆ ನಡೆಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜಾಂಗಡಾ ಅವರ ‘ನಾಚಿಕೆಗೇಡಿನ ಹೇಳಿಕೆ’ಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ‘ಸಣ್ಣ ಮನಃಸ್ಥಿತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

‘ಮಧ್ಯಪ್ರದೇಶ ಉಪ ಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ನಮ್ಮ ಧೈರ್ಯಶಾಲಿ ಸೇನೆಯನ್ನು ಅವಮಾನಿಸಿದರು. ಆದರೆ, ಪ್ರಧಾನಿ ಮೋದಿ ಅವರು ಕ್ರಮ ಕೈಗೊಳ್ಳಲಿಲ್ಲ. ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ನಮ್ಮ ಧೈರ್ಯಶಾಲಿ ಕರ್ನಲ್ ಬಗ್ಗೆ ಅಸಭ್ಯವಾಗಿ ಮಾತನಾಡಿದರು. ಆ ಸಚಿವರನ್ನು ಈವರೆಗೆ ಪದಚ್ಯುತಿಗೊಳಿಸಿಲ್ಲ’ ಎಂದು ಖರ್ಗೆ ಹೇಳಿದ್ದಾರೆ.

‘ನರೇಂದ್ರ ಮೋದಿ ಅವರೇ, ನಿಮ್ಮ ನರನಾಡಿಗಳಲ್ಲಿ ಸಿಂಧೂರ ಇದೆ ಎಂದು ನೀವು ಹೇಳಿಕೊಳ್ಳುತ್ತೀರಿ... ಹಾಗಿದ್ದರೆ, ನೀವು ಮಹಿಳೆಯರಿಗೆ ಗೌರವ ನೀಡಿ, ಹೊಲಸು ಬಾಯಿಯ ಈ ಮುಖಂಡರನ್ನು ಪದಚ್ಯುತಗೊಳಿಸಬೇಕು’ ಎಂದು ಖರ್ಗೆ ಒತ್ತಾಯಿಸಿದ್ದಾರೆ.

ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿರುವ ಜಾಂಗಡಾ, ‘ಪ್ರೇರಣೆ ನೀಡಬೇಕು ಎಂಬ ಉದ್ದೇಶದಿಂದ’ ಹಾಗೆ ಮಾತನಾಡಿದ್ದುದಾಗಿ ತಿಳಿಸಿದ್ದಾರೆ.

ಜಾಂಗಡಾ ಹೇಳಿದ್ದೇನು?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಬೇಕಿತ್ತು. ಪತಿಯರನ್ನು ಕಳೆದುಕೊಂಡ ಮಹಿಳೆಯರು ವೀರಾಂಗನೆಯರ ರೀತಿಯಲ್ಲಿ ವರ್ತಿಸಬೇಕಿತ್ತು ಎಂದು ಜಾಂಗಡಾ ಹೇಳಿದ್ದರು. ಪ್ರವಾಸಿಗರು ಅಗ್ನಿವೀರರಿಗೆ ನೀಡುವ ತರಬೇತಿ ಪಡೆದುಕೊಂಡವರಾಗಿದ್ದರೆ ಸಾವಿನ ಸಂಖ್ಯೆ ಕಡಿಮೆ ಇರುತ್ತಿತ್ತು ಎಂದೂ ಅವರು ಹೇಳಿದ್ದರು. ‘ಪತಿಯರನ್ನು ಕಳೆದುಕೊಂಡ ಮಹಿಳೆಯರಲ್ಲಿ ಹುಮ್ಮಸ್ಸು ಇರಲಿಲ್ಲ ವೀರಾಂಗನೆಯ ಭಾವ ಇರಲಿಲ್ಲ. ಹೀಗಾಗಿ ಅವರು ದಾಳಿಗೆ ಒಳಗಾದರು’ ಎಂದು ಜಾಂಗಡಾ ಹೇಳಿದ್ದರು. ‘ಬೇಡಿಕೊಂಡ ಮಾತ್ರಕ್ಕೆ ಭಯೋತ್ಪಾದಕರು ಅವರನ್ನು ಬಿಟ್ಟುಬಿಡುವುದಿಲ್ಲ. ನಮ್ಮ ಜನ ಕೈಮುಗಿದು ನಿಂತು ಮೃತಪಟ್ಟರು’ ಎಂದೂ ಅವರು ಹೇಳಿದ್ದರು. ಪ್ರತಿಯೊಬ್ಬ ಪ್ರವಾಸಿಗನಿಗೂ ಅಗ್ನಿವೀರರಿಗೆ ನೀಡುವ ತರಬೇತಿ ಒದಗಿಸಿದ್ದರೆ ಅವರು ಭಯೋತ್ಪಾದಕರನ್ನು ಸುತ್ತುವರಿಯಬಹುದಿತ್ತು. ಆಗ ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.