ADVERTISEMENT

ಮೋದಿ ಸರ್ಕಾರ ನಿರ್ಧರಿಸಿದಂತೆ ‘ಜಿ ರಾಮ್‌ ಜಿ’ ‘ರೇವಡಿ’ಯಾಗಲಿದೆ: ಖರ್ಗೆ

ಪಿಟಿಐ
Published 19 ಜನವರಿ 2026, 14:38 IST
Last Updated 19 ಜನವರಿ 2026, 14:38 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ದೇಶದ ಗ್ರಾಮೀಣ ಜನರಿಗೆ ಕೆಲಸವು ಇನ್ನು ಮುಂದೆ ಹಕ್ಕಾಗಿ ಉಳಿಯುವುದಿಲ್ಲ. ಬದಲಿಗೆ ಮೋದಿ ಸರ್ಕಾರ ನಿರ್ಧರಿಸಿದಂತೆ ವಿತರಿಸಬೇಕಾದ ‘ರೇವಡಿ’ (ಉಚಿತ ಕೊಡುಗೆಗಳು/ಭಿಕ್ಷೆ) ಆಗಿ ಬದಲಾಗಲಿದೆ’ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಟೀಕಿಸಿದ್ದಾರೆ. 

‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಕಾಯ್ದೆ ಮೂಲಕ ರಾಜ್ಯಗಳಿಗೆ ಆರ್ಥಿಕ ಹೊರೆಯಾಗುವ ಜತೆಗೆ, ಜನರ ಕೆಲಸದ ಹಕ್ಕನ್ನೂ ಕದಿಯಲಾಗುತ್ತದೆ’ ಎಂದು ಅವರು ಗ್ರಾಮೀಣ ಜನರಿಗಾಗಿ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಕಾಯ್ದೆ ಮರುಸ್ಥಾಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ದೇಶದಾದ್ಯಂತ ಕೈಗೊಂಡಿರುವ ‘ನರೇಗಾ ಬಚಾವೊ ಸಂಗ್ರಾಮ’ದ ಭಾಗವಾಗಿ ಈ ಪತ್ರ ಬರೆಯಲಾಗಿದೆ. ಈ ಅಭಿಯಾನ ಜನವರಿ 10ರಿಂದ ಆರಂಭವಾಗಿದ್ದು, ಫೆಬ್ರುವರಿ 25ರವರೆಗೆ ನಡೆಯಲಿದೆ.

ADVERTISEMENT

ಈ ಪತ್ರವನ್ನು ಎಲ್ಲ ಸ್ಥಳೀಯ ಭಾಷೆಗಳಿಗೆ ಅನುವಾದಿಸಿ ಗ್ರಾಮೀಣರಿಗೆ ತಲುಪಿಸುವಂತೆ ಕಾಂಗ್ರೆಸ್‌ ತನ್ನ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಸೂಚಿಸಿದೆ.

‘20 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್ ಸರ್ಕಾರವು ನರೇಗಾ ಕಾಯ್ದೆ ಜಾರಿಗೆ ತರುವ ಮೂಲಕ ಕೆಲಸ ಮಾಡುವ ಸಾಂವಿಧಾನಿಕ ಹಕ್ಕಿಗೆ ಜೀವ ತುಂಬಿತ್ತು. ಅಂದಿನಿಂದ ನರೇಗಾ 180 ಕೋಟಿಗೂ ಹೆಚ್ಚು ದಿನಗಳ ಕೆಲಸವನ್ನು ಸೃಜಿಸಿದೆ. ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡುವ ಮೂಲಕ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಪಡಿಸಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಮೋದಿ ಸರ್ಕಾರ ನರೇಗಾದ ಆತ್ಮವನ್ನು ನಾಲ್ಕು ರೀತಿಯಲ್ಲಿ ನಾಶ ಮಾಡಲು ಮುಂದಾಗಿದೆ. ನಿಮ್ಮ ಕೆಲಸದ ಹಕ್ಕನ್ನು ಕದಿಯಲಾಗುತ್ತದೆ. ದೇಶದಾದ್ಯಂತ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕೆಲಸವು ಕಾನೂನುಬದ್ಧ ಖಾತರಿಯಾಗಿತ್ತು. ಯಾವುದೇ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಹುಡುಕುವ ಕುಟುಂಬಕ್ಕೆ 15 ದಿನಗಳಲ್ಲಿ ಕೆಲಸ ಒದಗಿಸಬೇಕಾಗಿತ್ತು. ಆದರೆ, ಕೆಲಸವು ಇನ್ನು ಮುಂದೆ ಹಕ್ಕಾಗಿರುವುದಿಲ್ಲ. ಈ ಯೋಜನೆಯಡಿ ಯಾವ ಗ್ರಾಮ ಪಂಚಾಯಿತಿಗೆ ಕೆಲಸ ನೀಡಬೇಕು ಎಂಬುದನ್ನು ಮೋದಿ ಸರ್ಕಾರ ನಿರ್ಧರಿಸುತ್ತದೆ. ವೇತನದ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ’ ಎಂದು ಆರೋಪಿಸಲಾಗಿದೆ.

‘ಸುಳ್ಳು ಸುದ್ದಿ ಹರಡುತ್ತಿರುವ ಕಾಂಗ್ರೆಸ್‌’

ನವದೆಹಲಿ: ‘ವಿಬಿ–ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ. ‘ಈ ಯೋಜನೆಯಡಿ ಕೆಲವು ಪಂಚಾಯಿತಿಗಳಲ್ಲಿ ಮಾತ್ರ ಉದ್ಯೋಗ ಕಲ್ಪಿಸಲಾಗುತ್ತದೆ ಎಂದು ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ಈ ಹೊಸ ಕಾಯ್ದೆಯು ಜನರ ಕೆಲಸದ ಹಕ್ಕನ್ನು ಬಲಪಡಿಸುತ್ತದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ. ‘ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಬಲಪಡಿಸುತ್ತಿಲ್ಲ ಬದಲಿಗೆ ದುರ್ಬಲಗೊಳಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ವಿಚಾರ ಸಿದ್ಧಾಂತ ಮತ್ತು ಆದರ್ಶಗಳನ್ನು ಕೈಬಿಟ್ಟಿದೆ’ ಎಂದು ದೂರಿದ್ದಾರೆ. ‘ವಿಬಿ–ಜಿ ರಾಮ್‌ ಜಿ ಎಂದರೆ ಹಳ್ಳಿಗಳ ಅಭಿವೃದ್ಧಿ. ನಾವು ಮನರೇಗಾ ಯೋಜನೆಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ₹9 ಲಕ್ಷ ಕೋಟಿ ಅನುದಾನ ನೀಡಿರುವುದೇ ಇದಕ್ಕೆ ಸಾಕ್ಷಿ. ಆದರೆ ಯುಪಿಎ ಸರ್ಕಾರ ₹2 ಲಕ್ಷ ಕೋಟಿ ಮಾತ್ರ ಅನುದಾನ ನೀಡಿತ್ತು’ ಎಂದು ತಿಳಿಸಿದ್ದಾರೆ. ‘100 ದಿನಗಳ ಬದಲು 125 ದಿನಗಳ ಕೆಲಸ ನೀಡುತ್ತಿದ್ದೇವೆ. 15 ದಿನಗಳಲ್ಲಿ ನಿರುದ್ಯೋಗ ಭತ್ಯೆ ನೀಡುವ ಅವಕಾಶ ಕಲ್ಪಿಸಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.