ADVERTISEMENT

ಪುಟಿನ್–ಕಿಮ್ ಮಾತುಕತೆ | ಉ.ಕೊರಿಯಾಗೆ ಉಪಗ್ರಹ ತಂತ್ರಜ್ಞಾನದ ನೆರವು: ರಷ್ಯಾ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 16:24 IST
Last Updated 13 ಸೆಪ್ಟೆಂಬರ್ 2023, 16:24 IST
<div class="paragraphs"><p>ರಷ್ಯಾದಲ್ಲಿ ಬುಧವಾರ ನಡೆದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಹಾಗೂ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಪರಸ್ಪರ ಹಸ್ತಲಾಘವ ಮಾಡಿಕೊಂಡರು.</p></div>

ರಷ್ಯಾದಲ್ಲಿ ಬುಧವಾರ ನಡೆದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಹಾಗೂ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಪರಸ್ಪರ ಹಸ್ತಲಾಘವ ಮಾಡಿಕೊಂಡರು.

   

ಮಾಸ್ಕೊ/ ಸೋಲ್: ರಷ್ಯಾಕ್ಕೆ ಭೇಟಿ ನೀಡಿರುವ ಉತ್ತರ ಕೊರಿಯಾ ನಾಯಕ ಕಿಮ್‌ ಜಾಂಗ್ ಉನ್‌ ಅವರು, ಬುಧವಾರ ನಡೆದ ಶೃಂಗಸಭೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಜೊತೆಗೆ ಮಾತುಕತೆ ನಡೆಸಿದರು.

ಬೈಕೊನುರ್ ಕೋಸ್ಮೋಡ್ರೋಮ್‌ ಉಪಗ್ರಹ ಉಡ್ಡಯನ ಕೇಂದ್ರದಲ್ಲಿ ಉಭಯ ನಾಯಕರು ಚರ್ಚೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಪುಟಿನ್‌, ‘ಉಪಗ್ರಹಗಳ ಉಡ್ಡಯನಕ್ಕೆ ಸಂಬಂಧಿಸಿದಂತೆ ಉತ್ತರ ಕೊರಿಯಾಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಸಿದ್ಧ’ ಎಂದು ಘೋಷಿಸಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕಿಮ್‌, ‘ಪುಟಿನ್‌ ಅವರ ನಿರ್ಧಾರ ಹಾಗೂ ರಷ್ಯಾ ನಾಯಕತ್ವವನ್ನು ನಾವು ಬೆಂಬಲಿಸುತ್ತೇವೆ. ಸಾಮ್ರಾಜ್ಯಶಾಹಿ ವ್ಯವಸ್ಥೆ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ’ ಎಂದ ಅವರು, ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವ ಬಗ್ಗೆ ಪರೋಕ್ಷವಾಗಿ ಬೆಂಬಲ ಘೋಷಿಸಿದ್ದಾರೆ. 

ಇಬ್ಬರು ನಾಯಕರ ಭೇಟಿ ವೇಳೆ ಉಕ್ರೇನ್‌ ಮೇಲಿನ ದಾಳಿಯ ದೃಷ್ಟಿಯಿಂದ ರಷ್ಯಾವು ಸಂಭವನೀಯ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಅನುಮಾನ ವ್ಯಕ್ತಪಡಿಸಿವೆ.

ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ಪುಟಿನ್‌ ಉತ್ತರಿಸಿದರು.

‘ಉತ್ತರ ಕೊರಿಯಾವು ರಾಕೆಟ್‌ ಎಂಜಿನಿಯರಿಂಗ್‌ ತಂತ್ರಜ್ಞಾನ ಕುರಿತು ವಿಶೇಷ ಆಸ್ಥೆ ಹೊಂದಿದೆ. ಅವರ ನೆಲದಲ್ಲಿ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಅಗತ್ಯ ನೆರವು ನೀಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇಬ್ಬರ ನಡುವಿನ ಭೇಟಿಯು ರಷ್ಯಾ ಜೊತೆಗೆ ನಮ್ಮ ಹಳೆಯ ಸ್ನೇಹ ವೃದ್ಧಿ ಹಾಗೂ ಒಪ್ಪಂದಗಳ ಬಗ್ಗೆ ನಂಬಿಕೆಯನ್ನು ಬಲಗೊಳಿಸಿದೆ. ಉಪಗ್ರಹ ಉಡ್ಡಯನ ಕೇಂದ್ರದಲ್ಲಿಯೇ ಭೇಟಿಗೆ ಅವಕಾಶ ಕಲ್ಪಿಸಿರುವುದು ಖುಷಿ ತಂದಿದೆ. ಪರಸ್ಪರ ಅರ್ಥೈಸಿಕೊಳ್ಳಲು ಇದು ನೆರವಾಗಲಿದೆ’ ಎಂದು  ಕಿಮ್‌ ಹೇಳಿದರು.

ಎರಡು ಕ್ಷಿಪಣಿ ಉಡ್ಡಯನ

ಮಾತುಕತೆಗೂ ಕೆಲವೇ ಗಂಟೆಗಳಿಗೂ ಮೊದಲು ಉತ್ತರ ಕೊರಿಯಾವು ಕಡಿಮೆ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡ್ಡಯನ ಮಾಡಿದೆ. ಕಿಮ್‌ ಅವರ ಅನುಪಸ್ಥಿತಿಯಲ್ಲಿ ನಡೆದ ಪ್ರಥಮ ಕ್ಷಿಪಣಿ ಉಡ್ಡಯನ ಇದಾಗಿದೆ. ಉತ್ತರ ಕೊರಿಯಾವು ದೇಶದ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಇದು ನಿದರ್ಶನವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಕಿಮ್‌ ಅಧಿಕಾರಕ್ಕೆ ಬಂದ 12 ವರ್ಷಗಳ ಅವಧಿಯಲ್ಲಿ ಕೇವಲ ಏಳು ಬಾರಿ ಮಾತ್ರವೇ ವಿದೇಶ ಪ್ರವಾಸಕೈಗೊಂಡಿದ್ದಾರೆ. 2018ರಿಂದ 2019ರ ನಡುವೆಯೇ ಇಷ್ಟು ಸಂಖ್ಯೆಯ ಪ್ರವಾಸಕೈಗೊಂಡಿದ್ದಾರೆ. ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಯುದ್ಧ ಸಾಮಗ್ರಿ ಉಸ್ತುವಾರಿ ಹೊತ್ತಿರುವ ಉನ್ನತ ಮಿಲಿಟರಿ ಅಧಿಕಾರಿಗಳ ಜೊತೆಗೆ ತನ್ನ ಖಾಸಗಿ ರೈಲಿನ ಮೂಲಕ ಮಂಗಳವಾರ ರಷ್ಯಾಕ್ಕೆ ಅವರು ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.