ADVERTISEMENT

ಯಸ್‌ ಚಂಡಮಾರುತ: 26ಕ್ಕೆ ಒಡಿಶಾ– ಪಶ್ಚಿಮ ಬಂಗಾಳದ ಕರಾವಳಿ ಪ್ರವೇಶ

ಪಿಟಿಐ
Published 24 ಮೇ 2021, 7:55 IST
Last Updated 24 ಮೇ 2021, 7:55 IST
ಯಸ್‌ ಚಂಡಮಾರುತ
ಯಸ್‌ ಚಂಡಮಾರುತ   

ಭುವನೇಶ್ವರ/ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿ ಯಸ್‌ ಚಂಡಮಾರುತ ತೀವ್ರ ಸ್ವರೂಪ ಪಡೆದು ಮೇ 26 ರಂದು ಒಡಿಶಾ–ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.

’ಯಸ್‌ ಚಂಡಮಾರುತವು ಮೇ 26ರ ಮಧ್ಯಾಹ್ನದ ಹೊತ್ತಿಗೆ ಒಡಿಶಾ–ಪಶ್ಚಿಮ ಬಂಗಾಳ ಕರಾವಳಿಗಳಲ್ಲಿ ಪರಾದೀಪ್‌ ಮತ್ತು ಸಾಗರ್‌ ದ್ವೀಪಗಳ ನಡುವೆ ಹಾದು ಹೋಗಲಿದೆ. ಈ ವೇಳೆ ಬಿರುಗಾಳಿಯ ತೀವ್ರ ಸ್ವರೂಪ ಪಡೆಯುವ ಚಂಡಮಾರುತ ಗಂಟೆಗೆ 155–165 ಕಿ.ಮೀ. ವೇಗದಲ್ಲಿ ಬೀಸಲಿದೆ‘ ಎಂದು ಕೋಲ್ಕತಾದ ಪ್ರಾದೇಶಿಕ ಹವಾಮಾನ ಇಲಾಖೆ ಕೇಂದ್ರದ ಉಪನಿರ್ದೇಶಕ ಸಂಜಿಬ್ ಬಂಡೋಪಾಧ್ಯಾಯ ಹೇಳಿದರು.

’ಚಂಡಮಾರುತವು ಸೋಮವಾರ ಬೆಳಿಗ್ಗೆ ಒಡಿಶಾದಲ್ಲಿನ ಪರಾದೀಪ್‌ ಮತ್ತು ಪಶ್ಚಿಮ ಬಂಗಾಳದ ಡಿಘಾದ ದಕ್ಷಿಣ–ಆಗ್ನೇಯಕ್ಕೆ 540 ಕಿ.ಮೀ. ಹಾಗೂ 630 ಕಿ.ಮೀ. ದೂರದಲ್ಲಿತ್ತು. ನಂತರ ಮಂಗಳವಾರ ಉತ್ತರ–ವಾಯುವ್ಯದತ್ತ ತೆರಳಲಿರುವ ಚಂಡಮಾರುತ ಬುಧವಾರ ಬೆಳಿಗ್ಗೆ ತೀವ್ರ ಸ್ವರೂಪ ಪಡೆಯಲಿದೆ‘ ಎಂದು ಇಲಾಖೆ ಹೇಳಿದೆ.

ADVERTISEMENT

ಪಶ್ಚಿಮ ಬಂಗಾಳ ಸರ್ಕಾರವು ಚಂಡಮಾರುತದ ನಿರ್ವಹಣೆಗೆ ರಾಜ್ಯ ಕಾರ್ಯಾಲಯ ನಂಬಣ್ಣದಲ್ಲಿ ನಿಯಂತ್ರಣ ಕೇಂದ್ರಗಳನ್ನು ತೆರೆದಿದೆ.

’ದಕ್ಷಿಣ ಮತ್ತು ಉತ್ತರ 24 ಪರಗಣದ ಕರಾವಳಿ ಜಿಲ್ಲೆಗಳಾದ ಪರ್ಬಾ ಮತ್ತು ಪಸ್ಚಿಮ ಮದಿನಿಪುರ ಹಾಗೂ ಹೌರಾ ಮತ್ತು ಹೂಗ್ಲಿಯ ಬಹಳಷ್ಟು ಪ್ರದೇಶಗಳಲ್ಲಿ ಹಗುರ ಮಳೆಯಾಗಲಿದೆ. ಮೇ 25 ರಂದು ಒಂದೆರಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದೆ. ಮೇಲಿನ ಪ್ರದೇಶಗಳ ಜೊತೆ ಕೋಲ್ಕತಾದಲ್ಲಿಯೂ ಮೇ 26 ರಂದು ವ್ಯಾಪಕ ಮಳೆಯಾಗಲಿದೆ‘ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ನಡುವೆ ಒಡಿಶಾ ಸರ್ಕಾರ ಸೋಮವಾರ ಲಾಕ್‌ಡೌನ್‌ ಸಡಿಲಗೊಳಿಸಿದ್ದು, ಮೇ 24 ಮತ್ತು 25 ರಂದು 10 ಕರಾವಳಿ ಜಿಲ್ಲೆಗಳಲ್ಲಿ ಮಳಿಗೆಗಳನ್ನು ತೆರೆಯಲು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಅನುಮತಿ ನೀಡಿದೆ. ಚಂಡಮಾರುತ ತನ್ನ ಪ್ರಭಾವ ಬೀರುವ ಮುನ್ನ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಬಹುದು. ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತವಾಗಿ ಕರೆತರಲು ಒಡಿಶಾ ಸರ್ಕಾರ ರಕ್ಷಣಾ ತಂಡವನ್ನು ನೇಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.