
ನವದೆಹಲಿ: ಯಮುನಾ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜತೆಗೆ ಕೇಂದ್ರ ಸರ್ಕಾರವು ಇತ್ತೀಚೆಗೆ ಸಭೆ ನಡೆಸಿದೆ. ಈ ವೇಳೆ ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿ ನೀರು ಯಮುನಾ ನದಿಯನ್ನು ಸೇರದಂತೆ ಕ್ರಮ ಕೈಗೊಳ್ಳಲು ಹಾಗೂ ಶುದ್ಧ ನೀರಿನ ಹರಿವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ನದಿಯ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಯಮುನೆಗೆ ಶುದ್ಧ ನೀರಿನ ಹರಿವನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ಗಂಗಾ ಮೇಲ್ದಂಡೆ ಕಾಲುವೆಯಿಂದ 800 ಕ್ಯೂಸೆಕ್ ನೀರನ್ನು ನೇರವಾಗಿ ವಜೀರಾಬಾದ್ ಅಣೆಕಟ್ಟಿನತ್ತ ತಿರುಗಿಸಲು ಚರ್ಚೆ ನಡೆಸಲಾಗಿದೆ. ಜತೆಗೆ ಹರಿಯಾಣದ ಮುನಾಕ್ ಕಾಲುವೆಯಿಂದಲೂ 100 ಕ್ಯೂಸೆಕ್ ನೀರನ್ನು ನದಿಗೆ ತಿರುಗಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಇದಲ್ಲದೇ, ಹತಿನಿಕಿಂಡ ಬ್ಯಾರೇಜ್‌ನಿಂದಲೂ ಯಮುನೆಗೆ ಮೂರನೇ ಹರಿವನ್ನು ನಿರ್ಮಿಸಿ, ನದಿಯಲ್ಲಿ ಹೂಳು ಮತ್ತು ತ್ಯಾಜ್ಯ ಸಂಗ್ರಹವಾಗುವುದನ್ನು ತಡೆಗಟ್ಟುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ, ಉತ್ತರ ಪ್ರದೇಶ ಹಾಗೂ ಹರಿಯಾಣದ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಬರುತ್ತಿರುವ ನೀರಿನ ನೈಜ ಗುಣಮಟ್ಟವನ್ನು ಪರಿಶೀಲಿಸುವುದಕ್ಕಾಗಿ ಹೊರಗಿನ ಸಂಸ್ಥೆಯೊಂದನ್ನೂ ಕೇಂದ್ರ ಜಲಶಕ್ತಿ ಸಚಿವಾಲಯ ನೇಮಿಸಿಕೊಳ್ಳುತ್ತಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.