ADVERTISEMENT

ಗೋದ್ರಾ ನಂತರ ಗುಜರಾತ್ ಸರ್ಕಾರ ವಜಾ ಮಾಡಲು ವಾಜಪೇಯಿ ನಿರ್ಧರಿಸಿದ್ದರು-ಸಿನ್ಹಾ

​ಪ್ರಜಾವಾಣಿ ವಾರ್ತೆ
Published 11 ಮೇ 2019, 9:09 IST
Last Updated 11 ಮೇ 2019, 9:09 IST
ಯಶವಂತಸಿನ್ಹಾ
ಯಶವಂತಸಿನ್ಹಾ   

ಭೋಪಾಲ್: ಗೋದ್ರಾ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರವನ್ನು ವಜಾ ಮಾಡಲು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿರ್ಧರಿಸಿದ್ದರು. ಆದರೆ, ಈ ನಿರ್ಧಾರ ತೆಗೆದುಕೊಂಡರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಂದಿನ ಗೃಹ ಮಂತ್ರಿ ಲಾಲ್ ಕೃಷ್ಣ ಅಡ್ವಾಣಿ ಹೇಳಿದ್ದರು ಎಂದು ಮಾಜಿ ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ.

ಭೋಪಾಲ್‌‌ನಲ್ಲಿ ಪತ್ರಕರ್ತರೊಂದಿಗೆ ಈ ವಿಷಯ ತಿಳಿಸಿದ್ದಾರೆ. ಗುಜರಾತ್‌‌ನಲ್ಲಿ ನಡೆದ ಗಲಭೆ ಕಾರಣ ವಾಜಪೇಯಿ ಅವರು ಮೋದಿ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಲು ತೀರ್ಮಾನಿಸಿದ್ದರು. 2002ರಲ್ಲಿ ಗೋವಾದಲ್ಲಿ ನಡೆಯುತ್ತಿದ್ದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹೋಗುವ ಮುನ್ನ ಈ ವಿಷಯ ತಿಳಿಸಿದ ವಾಜಪೇಯಿ, ಒಂದು ವೇಳೆ ಮೋದಿ ರಾಜೀನಾಮೆ ನೀಡದಿದ್ದರೆ ಸರ್ಕಾರವನ್ನೇ ವಜಾ ಮಾಡುವುದಾಗಿ ಹೇಳಿದ್ದರು.

ನನಗೆ ತಿಳಿದಿರುವ ಮಾಹಿತಿ ಪ್ರಕಾರ, ಈ ಸಂಬಂಧ ಪಕ್ಷದ ಸಭೆ ನಡೆಯಿತು. ಆಗ ಅಡ್ವಾಣಿ ಅವರು ಮೋದಿ ಸರ್ಕಾರವನ್ನು ವಜಾ ಮಾಡುವ ತೀರ್ಮಾನವನ್ನು ವಿರೋಧಿಸಿದರು. ಅಲ್ಲದೆ, ಒಂದು ವೇಳೆ ಈ ನಿರ್ಧಾರ ಪ್ರಕಟವಾದರೆ, ರಾಜೀನಾಮೆ ನೀಡುವುದಾಗಿ ತಿಳಿಸಿದರು.

ADVERTISEMENT

ಐಎನ್ಎಸ್ ರಾಜೀವ್ ಗಾಂಧಿಯವರ ಕುಟುಂಬದ ಟ್ಯಾಕ್ಸಿಯಾಗಿತ್ತು ಎಂಬ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಶವಂತ್ ಸಿನ್ಹಾ, ಇದು ಪ್ರಧಾನಿ ಮೋದಿಯವರ ಗೌರವಕ್ಕೆ ತಕ್ಕುದಾದ ಮಾತಲ್ಲ. ಚುನಾವಣೆಯಲ್ಲಿ ಮತಕೇಳುವುದು ಮೋದಿ ಆಡಳಿತದ ಕಾರ್ಯವೈಖರಿಯ ಕುರಿತೇ ವಿನಃ ದೇಶದ ಇತಿಹಾಸದ ಮೇಲಲ್ಲ. ಯಾಕೆ ಚುನಾವಣೆಯ ಸಮಯದಲ್ಲಿಯೇ ಪಾಕಿಸ್ತಾನದ ವಿಷಯ ಚರ್ಚೆಯಾಗುತ್ತದೆ, ಇದು ದುರಾದೃಷ್ಟಕರ ಎಂದು ಸಿನ್ಹಾ ಅಭಿಪ್ರಾಯಪಟ್ಟರು.

ಮೋದಿ ಸರ್ಕಾರದ ಜಿಡಿಪಿಗೂ ಕಳೆದ ಯುಪಿಎ ಸರ್ಕಾರದ ಜಿಡಿಪಿಗೂ ಹೋಲಿಸಿದರೆ, ಯುಪಿಎ ಸರ್ಕಾರದ ಜಿಡಿಪಿ ಹೆಚ್ಚಿಗೆ ಇದೆ. ಅಂಕಿಅಂಶಗಳ ಕುರಿತು ಮೋದಿ ಸುಳ್ಳು ಹೇಳಿದ್ದಾರೆ.ಆರ್ಥಿಕ ಸ್ಥಿತಿ ತೀರಾ ಹದೆಗೆಟ್ಟಿದ್ದು ಮುಂಬರುವ ಸರ್ಕಾರ ಇದನ್ನು ಅನುಭವಿಸಬೇಕಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.