ADVERTISEMENT

ಔರಂಗಜೇಬನ ಶ್ಲಾಘಿಸಿದ ಅಬೂ ಆಜ್ಮಿ ವಿರುದ್ಧ ಆದಿತ್ಯನಾಥ ಕಿಡಿ; ಆಜ್ಮಿ ಅಮಾನತು

ಉತ್ತರ ಪ್ರದೇಶಕ್ಕೆ ಕಳಿಸಿ, ನೋಡಿಕೊಳ್ಳುತ್ತೇವೆ: ಯೋಗಿ

ಪಿಟಿಐ
Published 5 ಮಾರ್ಚ್ 2025, 14:20 IST
Last Updated 5 ಮಾರ್ಚ್ 2025, 14:20 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ‘ಮೊಘಲ್‌ ದೊರೆ ಔರಂಗಜೇಬ್‌ನನ್ನು ಹೊಗಳಿದ ಮಹಾರಾಷ್ಟ್ರದ ಶಾಸಕ ಅಬೂ ಆಜ್ಮಿ ಅವರನ್ನು ಸಮಾಜವಾದಿ  ಪಕ್ಷದಿಂದ ಉಚ್ಚಾಟನೆ ಮಾಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ. ಇಂಥವರಿಗೆ ಹೇಗೆ ಪಾಠ ಕಲಿಸಬೇಕು ಎಂದು ನಮ್ಮ ಸರ್ಕಾರಕ್ಕೆ ಗೊತ್ತು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬುಧವಾರ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಅವರನ್ನು ಇಲ್ಲಿಗೆ ಕರೆತನ್ನಿ, ಇಲ್ಲಿ ‘ಚೆನ್ನಾಗಿ’ ನೋಡಿಕೊಳ್ಳುತ್ತೇವೆ’ ಎಂದು ಮಾರ್ಮಿಕವಾಗಿ ಹೇಳಿದರು.

ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು,  ‘ಹಿಂದೂಗಳ ಮೇಲೆ ಜಜಿಯಾ ತೆರಿಗೆ ವಿಧಿಸುತ್ತಿದ್ದ, ಬಾಯಾರಿದ ತಂದೆಗೇ ಗುಟುಕು ನೀರು ನೀಡದ ಔರಂಗಜೇಬ್‌ನನ್ನು ಪಕ್ಷವು ಮಾದರಿಯಾಗಿ ಪರಿಗಣಿಸಿದೆ’ ಎಂದು ಹರಿಹಾಯ್ದರು. 

ADVERTISEMENT

‘ಸಮಾಜವಾದಿ ಪಕ್ಷಕ್ಕೆ ತನ್ನ ಶಾಸಕರ ಮೇಲೆ ನಿಯಂತ್ರಣ ಇಲ್ಲ. ಅದು ಆಜ್ಮಿ ಅವರ ಹೇಳಿಕೆಯನ್ನು ಖಂಡಿಸಿ, ಅವರನ್ನು ಉಚ್ಚಾಟನೆ ಮಾಡಬೇಕು’ ಎಂದರು.

'ಪಕ್ಷವು ಸಮಾಜವಾದಿ ನಾಯಕ ರಾಮ ಮನೋಹರ್ ಲೋಹಿಯಾ ಅವರ ಸಿದ್ಧಾಂತದಿಂದ ವಿಮುಖವಾಗುತ್ತಿದೆ. ಭಾರತದ ಪರಂಪರೆಯನ್ನು ಹೆಮ್ಮೆಯಾಗಿ ಸ್ವೀಕರಿಸದಿದ್ದರೂ ಅಡ್ಡಿಯಿಲ್ಲ. ಆದರೆ, ಲೋಹಿಯಾ ಅವರ ಸಿದ್ಧಾಂತವನ್ನಾದರೂ ಪಾಲಿಸಲಿ’ ಎಂದು ಹೇಳಿದರು.

ಅಬೂ ಆಜ್ಮಿ

ವಿಧಾನಸಭೆಯಿಂದ ಆಜ್ಮಿ ಅಮಾನತು

ಮುಂಬೈ: ಔರಂಗಜೇಬ್‌ನನ್ನು ಹೊಗಳಿದ ಆರೋಪಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಶಾಸಕ ಅಬೂ ಆಜ್ಮಿ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಹಾಲಿ ಬಜೆಟ್ ಅಧಿವೇಶದ ಅಂತ್ಯದವರೆಗೆ ಅಮಾನತು ಮಾಡಲಾಗಿದೆ.  ಬಜೆಟ್‌ ಅಧಿವೇಶನವು ಮಾ.26ರಂದು ಮುಕ್ತಾಯಗೊಳ್ಳಲಿದೆ. ಔರಂಗಜೇಬ್ ಕಾಲದಲ್ಲಿ ಭಾರತದ ಗಡಿಯು ಅಫ್ಗಾನಿಸ್ತಾನ ಮತ್ತು ಬರ್ಮಾ ವರೆಗೆ (ಮ್ಯಾನ್ಮಾರ್‌) ವಿಸ್ತರಿಸಿತ್ತು ಎಂದು ಆಜ್ಮಿ ಹೇಳಿದ್ದರು.

ಕ್ಷೇತ್ರದ ಜನರಿಗೆ ಮಾಡಿರುವ ಅನ್ಯಾಯ: ಆಜ್ಮಿ

ಅಮಾನತು ಬೆನ್ನಲ್ಲೇ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಆಜ್ಮಿ ‘ಇದು ನನಗೆ ಮಾತ್ರ ಅಲ್ಲ ನಾನು ಪ್ರತಿನಿಧಿಸುವ ಕ್ಷೇತ್ರದ ಲಕ್ಷಾಂತರ ಜನರಿಗೆ ಮಾಡಿರುವ ಅನ್ಯಾಯ. ಸದನದ ಒಳಗೆ ಯಾವುದೇ ಹೇಳಿಕೆ ನೀಡಿಲ್ಲ; ಹೊರಗೆ ನೀಡಿದ್ದೇನೆ.‌ ಆದರೂ ಅಮಾನತು ಮಾಡಲಾಗಿದೆ’ ಎಂದು ಹೇಳಿದ್ದಾರೆ. ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ. ಅಗತ್ಯ ಬಿದ್ದರೆ ನ್ಯಾಯಾಲಯಕ್ಕೂ ಹೋಗುತ್ತೇನೆ’ ಎಂದಿದ್ದಾರೆ. ಇದಕ್ಕೂ ಮುನ್ನ ‘ಎಕ್ಸ್‌’ನಲ್ಲಿ ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇತಿಹಾಸಕಾರರು ಮತ್ತು ಲೇಖಕರು ಹೇಳಿದ್ದನ್ನೇ ನಾನೂ ಹೇಳಿದ್ದೇನೆ. ಶಿವಾಜಿ ಮಹಾರಾಜ ಸಂಭಾಜಿ ಮಹಾರಾಜ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಆದಾಗ್ಯು ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಅದನ್ನು ವಾಪಸ್‌ ಪಡೆಯುತ್ತೇನೆ’ ಎಂದು ಹೇಳಿದ್ದಾರೆ.

‘ಮಹಾ’ ಕುರಿತ ದ್ವೇಷ ಮಿತಿಮೀರಿದೆ: ಆಯೇಶಾ ಟಾಕಿಯಾ

ಪಣಜಿ: ಗೋವಾದಲ್ಲಿ ಮಹಾರಾಷ್ಟ್ರದ ಮೇಲಿನ ದ್ವೇಷವು ನಂಬಲಾಗದ ಸ್ಥಿತಿಗೆ ತಲುಪಿದೆ ಎಂದು ಆಜ್ಮಿ ಸೊಸೆ ಅ‌ಬೂ ಫರ್ಹಾನ್‌ ಆಜ್ಮಿ ಅವರ ಪತ್ನಿ ಆಯೇಶಾ ಟಾಕಿಯಾ ಹೇಳಿದರು. ಸೂಪರ್‌ಮಾರ್ಕೆಟ್‌ ಪ್ರದೇಶದಲ್ಲಿ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬೂ ಫರ್ಹಾನ್‌ ಅವರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಈ ಹೇಳಿಕೆ ನೀಡಿದರು. ಇನ್‌ಸ್ಟಾಗ್ರಾಂನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಆಯೇಶಾ ಸ್ಥಳೀಯ ಗೂಂಡಾಗಳು ಪತಿ ಮತ್ತು ಪುತ್ರನಿಗೆ  ಬೆದರಿಸಿದ್ದಾರೆ ಹಲವು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಫರ್ಹಾನ್‌ ಅವರು ಸಹಾಯಕ್ಕಾಗಿ ‘100’ ಸಹಾಯವಾಣಿಗೆ ಕರೆ ಮಾಡಿದರೆ ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.