ADVERTISEMENT

ಸಿಎಎ: ಸಾಯಲೆಂದೇ ಪ್ರತಿಭಟನಕಾರರು ರಸ್ತೆಗೆ ಬಂದಿದ್ದರು –ಯೋಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:59 IST
Last Updated 19 ಫೆಬ್ರುವರಿ 2020, 19:59 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ    

ಲಖನೌ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟವರು ವಾಸ್ತವವಾಗಿ ಸಾಯಲು ಬಯಸಿದ್ದವರು’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿರುವುದು ಇದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ವಿಧಾನ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ ಯಾರೊಬ್ಬರೂ ಮೃತಪಟ್ಟಿಲ್ಲ’ ಎಂದು ಪ್ರತಿಪಾದಿಸಿದರು.

‘ಸಾಯಲೇಬೇಕು ಎಂದು ಯಾರಾದರೂ ರಸ್ತೆಗೆ ಬಂದರೆ ಅದನ್ನು ಯಾರಿಂದಲೂ ತಪ್ಪಿಸಲಾಗದು’ ಎಂದು ಹೇಳಿದ ಅವರು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ADVERTISEMENT

‘ಪೊಲೀಸರಿಂದ ಯಾರೊಬ್ಬರು ಸತ್ತಿಲ್ಲ. ಗಲಭೆಕೋರರು ಹಾರಿಸಿದ ಗುಂಡಿನಿಂದ ಪ್ರತಿಭಟನಕಾರರು ಸತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಹೇಳಿದರು. ಆದರೆ, ಇನ್ನೊಂದೆಡೆ ಪೊಲೀಸರೇ ಈ ಹಿಂದೆ, ‘ಪೊಲೀಸರ ಗುಂಡಿನಿಂದಲೂ ಕೆಲ ಪ್ರತಿಭಟನಕಾರರು ಸತ್ತಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.

ಸಿಎಎ ವಿರುದ್ಧದ ಪ್ರತಿಭಟನೆ ಬೆಂಬಲಿಸಿದ್ದಕ್ಕಾಗಿ ವಿರೋಧಪಕ್ಷಗಳ ಮುಖಂಡರು ಮಹಮ್ಮದ್‌ ಆಲಿ ಜಿನ್ನಾ ಬೆಂಬಲಿಗರು ಎಂದು ದೂಷಿಸಿದರು. ನಾವು ಶಾಂತಿಯುತ ಪ್ರತಿಭಟನೆಯ ವಿರುದ್ಧವಾಗಿಲ್ಲ. ಆದರೆ, ಕಾನೂನು ಕೈಗೆ ತೆಗೆದುಕೊಳ್ಳುವುದನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.