
ಎಐ ಚಿತ್ರ
ಜೌವಣಪುರ; ಉತ್ತರ ಪ್ರದೇಶ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ.
ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು ನೀಟ್ ಪರೀಕ್ಷೆಯಲ್ಲಿ ಪದೇ ಪದೇ ವಿಫಲ ಆಗುತ್ತಿದ್ದಕ್ಕೆ ಕಡೆಗೆ ಅಂಗವಿಕಲ ಕೋಟಾದಡಿ ಆದರೂ ಸೀಟು ಗಿಟ್ಟಿಸಿಕೊಳ್ಳಬೇಕೆಂದು ತನ್ನ ಜೀವಕ್ಕೇ ಸಂಚು ತಂದುಕೊಂಡಿದ್ದಾನೆ.
ಉತ್ತರ ಪ್ರದೇಶದ ಲಖನೌದಿಂದ 228 ಕಿ.ಮೀ ದೂರದಲ್ಲಿರುವ ಜೌವಣಪುರ ನಗರದ ಸುರಾಜ್ ಭಾಸ್ಕರ್ ಎಂಬ 21 ವರ್ಷದ ಯುವಕ ಅಂಗವಿಕಲ ಕೋಟಾದಡಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆಯುವುದಕ್ಕಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸುರಾಜ್ ಭಾಸ್ಕರ್ ವೈದ್ಯ ಆಗಬೇಕು ಎಂದು ಕನಸು ಕಂಡಿದ್ದ. ಇದಕ್ಕಾಗಿ ತಯಾರಿ ಕೂಡ ನಡೆಸುತ್ತಿದ್ದ. ಎರಡು ಸಾರಿ ನೀಟ್ ಪರೀಕ್ಷೆ ಬರೆದರೂ ಆತನಿಗೆ ಸೀಟು ಸಿಕ್ಕಿರಲಿಲ್ಲ. ಈ ನಡುವೆಯೇ ಆತ ಡೈರಿಯಲ್ಲಿ ‘ನಾನು ಡಾಕ್ಟರ್ ಆಗೇ ಆಗುತ್ತೇನೆ’ ಎಂದು ಬರೆದು ಇಡುತ್ತಿದ್ದನಂತೆ.
ಎರಡು ಸಾರಿಯೂ ನೀಟ್‌ನಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಹೇಗಾದರೂ ಮಾಡಿ ಡಾಕ್ಟರ್ ಆಗಬೇಕು ಎಂದು ನಿರ್ಧರಿಸಿ, ತನ್ನ ಎಡಗಾಲನ್ನು ಕತ್ತರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.
ಅಂದುಕೊಂಡಂತೆ ಸುರಾಜ್ ತನ್ನ ಕಾಲನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿದ್ದ. ಪೊಲೀಸರು ಬಂದು ಕೇಳಿದಾಗ ಏರಿಯಾದಲ್ಲಿ ಅಪರಚಿತರ ಗುಂಪು ಗಲಾಟೆ ವೇಳೆ ನನ್ನ ಕಾಲನ್ನು ಕತ್ತರಿಸಿದ್ದಾರೆ. ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿದ್ದ.
ತನಿಖೆಗೆ ಇಳಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಸುರಾಜ್ ಸುಳ್ಳು ಹೇಳಿದ್ದಾನೆ ಎಂದು ಕಂಡುಕೊಂಡ ಪೊಲೀಸರು ಆತನ ಡೈರಿ ಹಾಗೂ ಆತನ ಸಹೋದರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವೈದ್ಯಕೀಯ ಸೀಟು ಪಡೆಯಲೇ ಈತ ನಾಟಕ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಸದ್ಯ ತನ್ನ ಎಡಗಾಲನ್ನು ಕಳೆದುಕೊಂಡು ಜೌವಣಪುರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರಾಜ್, ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
‘ಸುರಾಜ್ ಪ್ರಕರಣ ನಮ್ಮೆಲ್ಲರನ್ನು ಬೆರುಗುಗೊಳಿಸಿದೆ. ಆತ ವೈದ್ಯಕೀಯ ಸೀಟು ಪಡೆಯಲು ಇಷ್ಟೆಲ್ಲಾ ಮಾಡಿರುವುದು ಗೊತ್ತಾಗಿದೆ. ಈತನ ವಿರುದ್ಧ ಯಾವ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಜೌವಣಪುರ ಎಸ್‌ಪಿ ಆಯುಷ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.