ADVERTISEMENT

ಹತ್ಯೆಗೈಯುವ ಉದ್ದೇಶದಿಂದ ಜಗನ್‌ ಮೇಲೆ ದಾಳಿ

7ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ರಿಮಾಂಡ್‌ ವರದಿ ಸಲ್ಲಿಕೆ

ಏಜೆನ್ಸೀಸ್
Published 28 ಅಕ್ಟೋಬರ್ 2018, 20:26 IST
Last Updated 28 ಅಕ್ಟೋಬರ್ 2018, 20:26 IST

ಹೈದರಾಬಾದ್‌: ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ಮಾಡಲಾಗಿತ್ತು ಎಂದು ರಿಮಾಂಡ್‌ ವರದಿ ತಿಳಿಸಿದೆ.

ಈ ಬಗ್ಗೆ ವಿಶಾಖಪಟ್ಟಣ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಲ್ಲ ಶೇಷು ಅವರು 7ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಜಗನ್‌ ಅವರ ಮೇಲೆ ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಗುರುವಾರ ವಿಮಾನ ನಿಲ್ದಾಣದ ಕೆಫೆಟೆರಿಯಾದ ಬಾಣಸಿಗ ಜಾನಿಪಲ್ಲಿ ಶ್ರೀನಿವಾಸ್‌ ರಾವ್‌ ಚೂಪಾದ ಚಾಕುವಿನಿಂದ ಇರಿದಿದ್ದ. ಈತನನ್ನು ತಕ್ಷಣವೇ ಬಂಧಿಸಲಾಗಿತ್ತು.

ADVERTISEMENT

‘ಒಂದು ವೇಳೆ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದರೆ ಜಗನ್‌ ಸಾವಿಗೀಡಾಗುವ ಸಾಧ್ಯತೆ ಇತ್ತು. ಹೀಗಾಗಿ, ಗಣ್ಯ ವ್ಯಕ್ತಿಯೊಬ್ಬರನ್ನು ಹತ್ಯೆಗೈಯಲು ಆರೋಪಿ ಪ್ರಯತ್ನಿಸಿದ್ದಾನೆ. ಇದು ಐಪಿಸಿ 307 ಸೆಕ್ಷನ್‌ ಅಡಿಯಲ್ಲಿನ ಕೃತ್ಯವಾಗಿದೆ. ಜಗನ್‌ ಅವರ ಜಾಗರೂಕತೆಯಿಂದ ಚಾಕು ಎಡಭುಜಕ್ಕೆ ಇರಿಯಲಾಗಿದೆ’ ಎಂದು ವರದಿ ತಿಳಿಸಿದೆ.

‘ಗಾಯವು 5 ಇಂಚುಗಳಷ್ಟಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಅಪೊಲೊ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ನೀಡಿದ ವರದಿಯಲ್ಲಿ ಗಾಯವು 0.5 ಸೆಂಟಿಮೀಟರ್‌ ಅಗಲ ಮತ್ತು ಆಳದಷ್ಟಿತ್ತು ಎಂದು ಬರೆದಿದ್ದರು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಬಗ್ಗೆ ಪ್ರತಿಕ್ರಿಯಿಸಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ವೈ.ವಿ. ಸುಬ್ಬಾರೆಡ್ಡಿ, ‘ದಾಳಿಯು ಪೂರ್ವನಿಯೋಜಿತವಾಗಿತ್ತು ಮತ್ತು ಜಗನ್‌ ಅವರನ್ನು ಕೊಲ್ಲುವ ಉದ್ದೇಶವಾಗಿತ್ತು ಎನ್ನುವ ನಮ್ಮ ಹೇಳಿಕೆಯನ್ನು ವರದಿ ಸಾಬೀತುಪಡಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.