ADVERTISEMENT

ಡೆಪ್ಯುಟಿ ಸ್ಪೀಕರ್ ಹುದ್ದೆ: ವೈಎಸ್‌ಆರ್‌ಸಿ ನಕಾರ?

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಮುಂದಿಟ್ಟ ಪಕ್ಷ l ಕಾಂಗ್ರೆಸ್‌– ಬಿಜೆಪಿಯಿಂದ ಸಮಾನ ಅಂತರ

ಪಿಟಿಐ
Published 24 ಜೂನ್ 2019, 1:44 IST
Last Updated 24 ಜೂನ್ 2019, 1:44 IST
ಡ್ಯಾನಿಷ್ ಅಲಿ
ಡ್ಯಾನಿಷ್ ಅಲಿ   

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹೊರತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಜತೆ ಗುರುತಿಸಿಕೊಳ್ಳದಿರಲು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಹೀಗಾಗಿ ಲೋಕಸಭೆ ಡೆಪ್ಯುಟಿ ಸ್ಪೀಕರ್‌ ಸ್ಥಾನವನ್ನು ಪಕ್ಷ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.

‘22 ಸದಸ್ಯರನ್ನು ಹೊಂದಿರುವ ವೈಎಸ್‌ಆರ್ ಕಾಂಗ್ರೆಸ್, ಲೋಕಸಭೆಯಲ್ಲಿ ನಾಲ್ಕನೇ ದೊಡ್ಡ ಪಕ್ಷವೆನಿಸಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಭಾನುವಾರ ತಿಳಿಸಿದ್ದಾರೆ.

ವೈಎಸ್‌ಆರ್‌ಸಿ ಪಕ್ಷಕ್ಕೆಡೆಪ್ಯುಟಿ ಸ್ಪೀಕರ್‌ ಸ್ಥಾನ ನೀಡುವ ಕುರಿತು ಅಧಿಕೃತ ಆಹ್ವಾನ ನೀಡಿಲ್ಲವಾದರೂ, ಆ ಬಗ್ಗೆ ಸೂಚನೆ ಇದೆ. ಡೆಪ್ಯುಟಿ ಸ್ಪೀಕರ್‌ ಹುದ್ದೆಯಿಂದ ಅಂತಹ ಲಾಭವೇನೂ ಆಗದು ಎಂಬ ಅಭಿಪ್ರಾಯ ಪಕ್ಷದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆಂಧ್ರಪ್ರದೇಶವನ್ನು ವಿಭಜಿಸಿದ ಕಾಂಗ್ರೆಸ್‌ ಪಕ್ಷವು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ. ಹೀಗಾಗಿ ಅವರೊಂದಿಗೂ ಅಂತರ ಕಾಯ್ದುಕೊಳ್ಳುತ್ತೇವೆ. ದೇಶದ ಹಿತಾಸಕ್ತಿಯಿಂದಾಗಿ ಕೆಲವು ವಿಚಾರಗಳಲ್ಲಿ ಸರ್ಕಾರಕ್ಕೆ ಪಕ್ಷ ಬೆಂಬಲ ನೀಡಲಿದೆ’ ಎಂದು ಅವರು ಹೇಳಿದ್ದಾರೆ.

ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಬಿಜೆಪಿ ಮುಖಂಡರ ಎದುರು ಪಕ್ಷ ಇಟ್ಟಿದೆ. ಈ ಸಂಬಂಧ ಉನ್ನತ ನಾಯಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಮುಖಂಡರು ಹೇಳಿದರು. ರಾಜ್ಯಕ್ಕೆ ವಿಶೇಷ ಸ್ಥಾನಮಾನ ಪಡೆಯುವ ವಿಚಾರ ಇಟ್ಟುಕೊಂಡು ಚುಣಾವಣೆಗೆ ಇಳಿದಿದ್ದ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಭರ್ಜರಿ ಗೆಲುವು ದಾಖಲಿಸಿ ಅಧಿಕಾರ ಪಡೆದಿದ್ದಾರೆ.

ಬಿಎಸ್‌ಪಿ: ಸಹೋದರ, ಸೋದರ ಸಿಬ್ಬಂದಿಗೆ ಮಣೆ ಹಾಕಿದ ಮುಖ್ಯಸ್ಥೆ

ಲಖನೌ : ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಂಬಂಧಿಕರನ್ನು ನೇಮಕ ಮಾಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು, ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಡ್ಯಾನಿಷ್ ಅಲಿ ಅವರನ್ನು ಆಯ್ಕೆ ಮಾಡಿದ್ದಾರೆ.

‍ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಸಹೋದರ ಆನಂದ್‌ಕುಮಾರ್‌ ಹಾಗೂ ರಾಷ್ಟ್ರೀಯ ಸಂಚಾಲರನ್ನಾಗಿ ಸೋದರ ಸಂಬಂಧಿ ಆಕಾಶ್‌ ಕುಮಾರ್ ಅವರನ್ನು ಭಾನುವಾರ ನೇಮಕ ಮಾಡಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ಅಮೋರಾ ಸಂಸದ ಡ್ಯಾನಿಷ್‌ ಅಲಿ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ನಗಿನಾ ಮೀಸಲು ಕ್ಷೇತ್ರದ ಸಂಸದ ಗಿರೀಶ್‌ ಚಂದ್ರ ಅವರನ್ನು ಮುಖ್ಯಸಚೇತರನ್ನಾಗಿ ನೇಮಕ ಮಾಡಲಾಗಿದೆ.

ಲಖನೌದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಏಕಕಾಲಕ್ಕೆ ಚುನಾವಣೆ: ಮಾಯಾವತಿ ವಿರೋಧ

‘ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಿಜೆಪಿಯ ಚಿಂತನೆಯ ಹಿಂದೆ ಮತಯಂತ್ರಗಳನ್ನು ತಿರುಚುವ ಮೂಲಕ ಒಂದೇ ಬಾರಿಗೆ ಎಲ್ಲಾ ಚುನಾವಣೆಗಳನ್ನು ಗೆಲ್ಲುವ ಹುನ್ನಾರ ಇದೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದರು.

ಇವಿಎಂ ಕಾರ್ಯವೈಖರಿ ಬಗ್ಗೆ ಎದ್ದಿರುವ ಶಂಕೆಗಳ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬುದು ಬಿಜೆಪಿಯ ಹೊಸ ಸಂಚು. ವಿರೋಧಪಕ್ಷಗಳನ್ನು ಇಲ್ಲವಾಗಿಸುವ ಹುನ್ನಾರ ಏಕಕಾಲದ ಚುನಾವಣೆಯ ಹಿಂದಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಸಹ ಶಂಕಾಸ್ಪದವಾಗಿದೆ’ ಎಂದರು. ‘ಬಿಜೆಪಿ ಗೆಲುವಿನಲ್ಲಿ ಯಾವುದೇ ಹುನ್ನಾರ ಇಲ್ಲದಿದ್ದರೆ, ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಲು ಬಿಜೆಪಿ ಏಕೆ ಹಿಂಜರಿಯುತ್ತಿದೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ. ಭವಿಷ್ಯದಲ್ಲಿ ಮತಪತ್ರ ಬಳಸಿಯೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ
ದ್ದಾರೆ’ ಎಂದು ಪಕ್ಷದ ನಾಯಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.