ADVERTISEMENT

ಕೋವಿಡ್‌: ಅಗ್ಗದ ದರದ ‘ರೆಮ್ಡಾಕ್‌’ ಲಭ್ಯ

ರೆಮ್ಡೆಸಿವಿರ್‌ನ ಜನರಿಕ್ ‌ಅವತರಣಿಕೆ ಬಿಡುಗಡೆ

ಪಿಟಿಐ
Published 13 ಆಗಸ್ಟ್ 2020, 22:02 IST
Last Updated 13 ಆಗಸ್ಟ್ 2020, 22:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ನೀಡಲು ಬಳಸುತ್ತಿರುವ ರೆಮ್ಡೆಸಿವಿರ್‌ ಔಷಧದ ಜನರಿಕ್ ಅವತರಣಿಕೆಯನ್ನು ಜೈಡಸ್ ಕ್ಯಾಡಿಲಾ ಕಂ‍ಪನಿಯು ಭಾರತೀಯ ಮಾರುಕಟ್ಟೆಗೆ ಅಗ್ಗದ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಮ್ಡೆಸಿವಿರ್ ಔಷಧದ 100 ಎಂ.ಜಿ. ಬಾಟಲಿಗೆ ₹ 5,400 ಬೆಲೆ ಇದೆ. ಜೈಡಸ್‌ ಕಂಪನಿ ಬಿಡುಗಡೆ ಮಾಡಿರುವ ರೆಮ್ಡೆಸಿವಿರ್‌ನ ಜನರಿಕ್ ಅವತರಣಿಕೆಗೆ ರೆಮ್ಡಾಕ್‌ ಎಂದು ಹೆಸರಿಡಲಾಗಿದೆ. ರೆಮ್ಡಾಕ್‌ನ 100 ಎಂ.ಜಿ. ಬಾಟಲಿಗೆ ₹ 2,800 ಬೆಲೆ ನಿಗದಿ ಮಾಡಲಾಗಿದೆ. ಇದು ಭಾರತದಲ್ಲಿ ಲಭ್ಯವಿರುವ ರೆಮ್ಡೆಸಿವಿರ್‌ನ ಜನರಿಕ್ ಅವತರಣಿಕೆಯಲ್ಲಿ ಅತ್ಯಂತ ಅಗ್ಗದ ಔಷಧವಾಗಿದೆ.

‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೆಮ್ಡಾಕ್‌ ಅನ್ನು ಪೂರೈಕೆ ಮಾಡಲಾಗುತ್ತದೆ. ಇದು ಅಗ್ಗದ ಔಷಧವಾಗಿರುವುದರಿಂದ ರೋಗಿಗಳಿಗೆ ಸುಲಭವಾಗಿ ದೊರೆಯಲಿದೆ’ ಎಂದು ಕಂಪನಿಯು ಹೇಳಿದೆ.

ADVERTISEMENT

ಅಮೆರಿಕದ ಗಿಲೇಡ್‌ ಕಂಪನಿಯು ರೆಮ್ಡೆಸಿವಿರ್ ಅನ್ನು ಅಭಿವೃದ್ಧಿ‍ಡಿಸಿದೆ. ಈ ಔಷಧವನ್ನು ಪರವಾನಗಿ ಪಡೆದು ಭಾರತದ ಹಲವು ಕಂಪನಿಗಳು ಈಗಾಗಲೇ ತಯಾರಿಸುತ್ತಿವೆ.

ರೆಮ್ಡೆಸಿವಿರ್‌ನ ಜನರಿಕ್ ಅವತರಣಿಕೆಯನ್ನು ತಯಾರಿಸಿ, ಮಾರಾಟ ಮಾಡಲು ಜೈಡಸ್ ಕ್ಯಾಡಿಲಾ ಕಂಪನಿಯು ಜುಲೈನಲ್ಲಷ್ಟೇಗಿಲೇಡ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆ ‘ಝೈಕೋವ್‌–ಡಿ’ ಈಗಾಗಲೇ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿದೆ.

ರಷ್ಯಾ ಲಸಿಕೆ ಪ್ರಶ್ನಿಸಿದ ಮಜುಂದಾರ್‌
‘ವಿಶ್ವದ ಮೊದಲ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದೇವೆ’ ಎಂದು ರಷ್ಯಾ ಹೇಳುತ್ತಿರುವುದನ್ನು ಬಯೋಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರಶ್ನಿಸಿದ್ದಾರೆ.

‘ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುತ್ನಿಕ್–ವಿ ಲಸಿಕೆಗೆ ಸಂಬಂಧಿಸಿದ ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳು ಲಭ್ಯವಿಲ್ಲ. ಅಲ್ಲದೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿರುವಾಗಲೇ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದು ರಷ್ಯಾದಲ್ಲಿ ಒಪ್ಪಿತವಾಗಿರಬಹುದು. ಆದರೆ ಇದನ್ನು ವಿಶ್ವದ ಮೊದಲ ಕೋವಿಡ್‌ ಲಸಿಕೆ ಎನ್ನಲಾಗದು. ಇನ್ನೂ ಹಲವು ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನಲ್ಲಿ ಸ್ಪುತ್ನಿಕ್–ವಿಗಿಂತಲೂ ಬಹಳ ಮುಂದೆ ಇವೆ’ ಎಂದು ವಿವರಿಸಿದ್ದಾರೆ.

ಜರ್ಮನಿ ಜತೆ ಲಸಿಕೆ ಸಹಕಾರ?: ಕೋವಿಡ್‌ ಪರಿಸ್ಥಿತಿ ಮತ್ತು ಕೋವಿಡ್ ಲಸಿಕೆ ಸಹಕಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಜರ್ಮನಿಯ ವಿದೇಶಾಂಗ ಸಚಿವ ಹೀಕೊ ಮಾಸ್ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಜರ್ಮನಿಯು ಅಭಿವೃದ್ಧಿಪ‍ಡಿಸುತ್ತಿರುವ ಕೋವಿಡ್‌ ಲಸಿಕೆ ಇನ್ನು ಕೆಲವೇ ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷದ ಆರಂಭದಲ್ಲಂತೂ ಇದು ಖಂಡಿತವಾಗಿಯೂ ಬಳಕೆಗೆ ಸಿಗಬಹುದು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.