ADVERTISEMENT

ಅಂಜುಮನ್: ಮಾ.16 ಒಳಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 16:50 IST
Last Updated 3 ಫೆಬ್ರುವರಿ 2011, 16:50 IST


ಬೆಂಗಳೂರು: ಧಾರವಾಡದ ಅಂಜುಮನ್ -ಎ- ಇಸ್ಲಾಂ ಸಂಸ್ಥೆಗೆ ಬರುವ ಮಾರ್ಚ್ 5ರಿಂದ 16ರ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಒಂದು ವಾರದ ಒಳಗೆ ಚುನಾವಣಾ ವೇಳಾಪಟ್ಟಿ ಹೊರಡಿಸಬೇಕು. ಚುನಾವಣೆಯನ್ನು ನಿಗದಿತ ಅವಧಿಯಲ್ಲಿ ಮುಗಿಸಿ ಆ ಬಗ್ಗೆ ಮಾರ್ಚ್ 28ರಂದು ಕೋರ್ಟ್‌ಗೆ ಮಾಹಿತಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಈ ಹಿಂದೆ ಕೋರ್ಟ್ ಆದೇಶವಿದ್ದರೂ ಅದನ್ನು ಪಾಲನೆ ಮಾಡದ ಸಂಸ್ಥೆಯ ಆಡಳಿತಾಧಿಕಾರಿ ಎ.ಎಚ್.ದೇವರ್ ಹೊರೂರ್ ಅವರನ್ನು ಪೀಠ ತರಾಟೆಗೆ ತೆಗೆದುಕೊಂಡಿತು.ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ಚುನಾವಣೆಗೆ ಆದೇಶವಿದ್ದರೂ, ಈ ಅಂಶವನ್ನು ಮುಚ್ಚಿಟ್ಟು ಧಾರವಾಡದ ಸಂಚಾರಿ ಪೀಠದಿಂದ ಚುನಾವಣೆ ನಡೆಸಲು ಹೆಚ್ಚಿನ ಕಾಲಾವಕಾಶ ಪಡೆದುಕೊಳ್ಳುವಲ್ಲಿ ಅವರು ಸಫಲರಾಗಿದ್ದರು. ಸಂಚಾರಿ ಪೀಠದಲ್ಲಿ ಬೇರೆ ಅರ್ಜಿ ಸಲ್ಲಿಸುವ ಮೂಲಕ ಆದೇಶ ಪಡೆದುಕೊಂಡಿರುವುದು ವಿಚಾರಣೆ ವೇಳೆ ತಿಳಿದುಬಂದ ಹಿನ್ನೆಲೆಯಲ್ಲಿ ಇದು ಪೀಠದ ಕೋಪಕ್ಕೆ ಕಾರಣವಾಯಿತು.

‘ಜೈಲು ಹೇಗಿದೆ ಎಂದು ಇನ್ನೂ ನೋಡಿದ ಹಾಗಿಲ್ಲ. ಈ ರೀತಿ ಕೋರ್ಟ್‌ಗೆ ವಂಚನೆ ಮಾಡುವ ಸಾಹಸಕ್ಕೆ ಕೈಹಾಕಿದರೆ ನಾವು (ಕೋರ್ಟ್) ಜೈಲು ಹೇಗಿದೆ ಎಂದು ತೋರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.‘ಒಂದು ವೇಳೆ ಮಾ.16ರ ಒಳಗೆ ಚುನಾವಣೆ ನಡೆಯದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ ಸ್ಥಳೀಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೀಠ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.