ADVERTISEMENT

ಅಂತರವಾಣಿಗೆ ಕಿವಿಗೊಡಿ: ವೆಂಕಟಸುಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಬೆಂಗಳೂರು: `ಅಂತರವಾಣಿಗೆ ಓಗೊಟ್ಟರೆ ಕೆಟ್ಟ ಕೆಲಸ ಮಾಡುವ ಪ್ರಮೇಯವೇ ಬರುವುದಿಲ್ಲ. ಆಗ ಹೆಸರು ಕೆಡಿಸಿಕೊಳ್ಳುವ ಪ್ರಶ್ನೆಯೂ ಉದ್ಭವಿಸುವುದಿಲ್ಲ' ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ವಿಪ್ರ ಶಾಸಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಅಂತರವಾಣಿಗೆ ಎಲ್ಲರೂ ಶಿಷ್ಯರಾಗಬೇಕು. ಅದರ ಉಪದೇಶಕ್ಕೆ ಬೆಲೆ ಕೊಡಬೇಕು. ವಿವೇಕದಿಂದ ಕೆಲಸ ಮಾಡಬೇಕು. ಮಾದರಿ ಕ್ಷೇತ್ರಗಳನ್ನು ರೂಪಿಸಿ ಮತ್ತೆ ಆಯ್ಕೆಯಾಗುವ ಮೂಲಕ ಇತರರಲ್ಲೂ ಪ್ರೋತ್ಸಾಹ ತುಂಬಬೇಕು' ಎಂದು ಸಲಹೆ ಮಾಡಿದರು.

`ಜನರಿಗೆ ಸಂತೋಷ ತರುವಂತಹ ಕೆಲಸ ಮಾಡಿದರೆ ಅದೇ ನಿಜವಾದ ದೇವರ ಪೂಜೆ. ಮಾಡಿದ ಒಳ್ಳೆಯ ಕೆಲಸಗಳು ಪ್ರಖರವಾಗಿ ಗೋಚರಿಸುವಂತೆ ನೋಡಿಕೊಳ್ಳಬೇಕು. ಜನರ ಮಧ್ಯೆ ಇರುವವರು ಇಕ್ಕಟ್ಟಿನ ಸ್ಥಿತಿಗೆ ಈಡಾದರೆ ಮಾಧ್ಯಮಗಳಲ್ಲಿ ಅದಕ್ಕೆ ಹೆಚ್ಚಿನ ಮಹತ್ವ ಸಿಗುತ್ತದೆ. ಆದ್ದರಿಂದ ವ್ಯಕ್ತಿತ್ವವನ್ನು ಜತನದಿಂದ ಕಾಪಾಡಿಕೊಳ್ಳಬೇಕು ಬಾಳುವ ಮಾರ್ಗವನ್ನು ಹಿಡಿಯಬೇಕು' ಎಂದು ಹೇಳಿದರು.

`ಸಂಘ ಶಕ್ತಿ ಸಮಾಜದ ಒಳಿತಿಗಾಗಿ ಬಳಕೆಯಾಗಬೇಕು' ಎಂದು ಅವರು ಅಭಿಪ್ರಾಯಪಟ್ಟರು.

ಸಂಸದ ಅನಂತಕುಮಾರ್, `ಮನೆಯಲ್ಲಿ ಸಿಕ್ಕ ಸಂಸ್ಕಾರದಿಂದ ನಾವೆಲ್ಲ ಸಜ್ಜನ ರಾಜಕಾರಣಿಗಳಾಗಿ ರೂಪುಗೊಂಡಿದ್ದೇವೆ. ನಾವು ಕೆಟ್ಟ ಕೆಲಸ ಮಾಡುವೆವು ಎಂದರೂ ನಮ್ಮ ಸಂಸ್ಕಾರ ಅದಕ್ಕೆ ಆಸ್ಪದ ನೀಡುವುದಿಲ್ಲ' ಎಂದು ತಿಳಿಸಿದರು. `ನಾವು ಮಾಡುವ ಪೂಜೆಯಲ್ಲೇ ಪ್ರಜಾತಂತ್ರದ ತಿರುಳಿದೆ. ಎಲ್ಲ ವರ್ಗಗಳ ಒಳಿತಿಗಾಗಿ ನಾವು ದುಡಿಯುತ್ತೇವೆ' ಎಂದು ಹೇಳಿದರು. ಮಹಾಸಭಾದಿಂದ ನಿರ್ಮಿಸುತ್ತಿರುವ ಮಹಿಳಾ ನಿಲಯಕ್ಕೆ ರೂ 25 ಲಕ್ಷ ಅನುದಾನವನ್ನು ಅವರು ಘೋಷಿಸಿದರು.

ಸನ್ಮಾನಿತರ ಪರವಾಗಿ ಮಾತನಾಡಿದ ಸಚಿವ ದಿನೇಶ ಗುಂಡುರಾವ್, `ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ಜಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲ ವರ್ಗಗಳ ಹಿತ ಕಾಪಾಡಲಿದ್ದಾರೆ' ಎಂದ ಅವರು, `ಬ್ರಾಹ್ಮಣರು ಮಾತ್ರವಲ್ಲದೆ ಎಲ್ಲ ಸಮುದಾಯಗಳ ಪ್ರೀತಿ-ವಿಶ್ವಾಸದಿಂದಲೇ ನಾವು ಶಾಸಕರಾಗಿ ಆಯ್ಕೆಯಾಗಿದ್ದೇವೆ' ಎಂದು ತಿಳಿಸಿದರು.

ಶಾಸಕ ಎಸ್.ಸುರೇಶ್‌ಕುಮಾರ್, `ಯಾವುದೇ ಕಾರಣಕ್ಕೂ ಸಮಾಜ ತಲೆ ತಗ್ಗಿಸುವ ಕೆಲಸವನ್ನು ನಾವು ಮಾಡುವುದಿಲ್ಲ' ಎಂದು ಭರವಸೆ ನೀಡಿದರು. ಬಿ.ಎನ್. ವಿಜಯಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್.ಎ. ರವಿಸುಬ್ರಹ್ಮಣ್ಯ ಮತ್ತು ಕೆ.ಬಿ. ಪ್ರಸನ್ನಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಮಹಾಸಭಾದ ಅಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.