ADVERTISEMENT

ಅಂತೂ ವಿಚಾರಣೆಗೆ ಹಾಜರಾದ ಜಯಲಲಿತಾ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 6:15 IST
Last Updated 20 ಅಕ್ಟೋಬರ್ 2011, 6:15 IST

 ಬೆಂಗಳೂರು (ಪಿಟಿಐ): ಅಕ್ರಮ ಆಸ್ತಿ ಗಳಿಕೆಯ ಆರೋಪಕ್ಕೆ ಗುರಿಯಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅರ್ಜಿಯ ವಿಚಾರಣೆಯು ಇಲ್ಲಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ  ವ್ಯವಸ್ಥೆ ಮಾಡಿರುವ ಕೋರ್ಟ್ ಸಭಾಂಗಣದಲ್ಲಿ  ನಡೆಯಲಿದ್ದು, ಕಲಾಪದಲ್ಲಿ ಭಾಗವಹಿಸಲು ಗುರುವಾರ ಬೆಳಿಗ್ಗೆಯೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಚೆನ್ನೈನಿಂದ ವಿಶೇಷ ವಿಮಾಣದಲ್ಲಿ ಇಲ್ಲಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ತಕ್ಷಣ ಪರಪ್ಪನ ಅಗ್ರಹಾರದ ಜೈಲಿಗೆ ತೆರಳಿದರು. ಜಯಲಲಿತಾ ಅವರು ಖುದ್ದು ಹಾಜರು ಆಗುವಂತೆ ಬುಧವಾರ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಅವರು ಗುರುವಾರ ಕೋರ್ಟ್ ಗೆ ಹಾಜರಾಗುತ್ತಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿ ವಿಶೇಷ ಕೋರ್ಟ್‌ ಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ ಈ ಪ್ರಕರಣದ ವಿಚಾರಣೆ ಇಲ್ಲಿನ ನಗರ ಸಿವಿಲ್ ಕೋರ್ಟ್ ಆವರಣದಲ್ಲಿನ ವಿಶೇಷ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಭದ್ರತೆಯ ಕಾರಣ ಈ ಕೋರ್ಟ್ ಅನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಆವರಣಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ADVERTISEMENT

 ವಿಚಾರಣಾ ಕೋರ್ಟ್ ವಿಮಾನ ನಿಲ್ದಾಣದಿಂದ 65 ಕಿ.ಮೀ. ದೂರದಲ್ಲಿದೆ, ಜೊತೆಗೆ ತಮಗೆ ಸೂಕ್ತ ಭದ್ರತೆ ಒದಗಿಸಲು ಕರ್ನಾಟಕಕ್ಕೆ ಸಾಧ್ಯವಿಲ್ಲದ್ದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಜಯಲಲಿತಾ ಅವರು ಮಾಡಿದ ಮನವಿಗಳನ್ನು ಸುಪ್ರೀಂ ಕೋರ್ಟ್ ಮತ್ತು ವಿಚಾರಣಾ ಕೋರ್ಟ್ ಗಳು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು  ಗುರುವಾರ ಕೋರ್ಟ್‌ಗೆ ಹಾಜರಾಗುವುದು ಅನಿವಾರ್ಯವಾಗಿ ಪರಿಣಮಿಸಿತ್ತು.

ಬೆಂಗಳೂರು ನಗರ ಪೊಲೀಸರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಸುತ್ತಮುತ್ತ  ಬುಧವಾರ ಸಂಜೆಯಿಂದಲೇ ಬಿಗಿ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.