ADVERTISEMENT

ಅಕಾಡೆಮಿ, ರಂಗಾಯಣಕ್ಕೆ ನೂತನ ಅಧ್ಯಕ್ಷರ ನೇಮಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಂಗೀತ ನೃತ್ಯ, ಯಕ್ಷಗಾನ, ಕೊಂಕಣಿ ಮತ್ತು ನಾಟಕ ಅಕಾಡೆಮಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ತಿಂಗಳು ಈ ನಾಲ್ಕು ಅಕಾಡೆಮಿಗಳ ಅಧ್ಯಕ್ಷರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಹೊಸಬರನ್ನು ನೇಮಕ ಮಾಡಲಾಗಿದೆ. ಆದಷ್ಟು ಬೇಗ ಸದಸ್ಯರನ್ನು ನೇಮಕ ಮಾಡಲಾಗುವುದು. ಹಾಲಿ ಇರುವ ಅಧ್ಯಕ್ಷರ ಅವಧಿ ಮುಗಿಯುತ್ತಿದ್ದಂತೆಯೇ ಹೊಸ ಅಧ್ಯಕ್ಷರನ್ನು ವಿವಿಧ ಅಕಾಡೆಮಿಗಳಿಗೆ ನೇಮಕ ಮಾಡುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರೊ. ಮಲ್ಪೆ ಲಕ್ಷ್ಮಿನಾರಾಯಣ ಸಾಮಗ- ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ. ಕಾಸರಗೋಡು ಚಿನ್ನಾ (ಎಸ್.ಶ್ರೀನಿವಾಸ ರಾವ್)-ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ. ವೈಜಯಂತಿ ಕಾಶಿ- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ. ಮಾಲತಿ ಸುಧೀರ್-ಕರ್ನಾಟಕ ನಾಟಕ ಅಕಾಡೆಮಿ.

ಪ್ರೊ.ಲಿಂಗದೇವರು ಹಳೇಮನೆ ಅವರ ನಿಧನದಿಂದ ತೆರವಾದ ಮೈಸೂರಿನ ರಂಗಾಯಣ ನಿರ್ದೇಶಕರ ಸ್ಥಾನಕ್ಕೆ ಡಾ.ಬಿ.ವಿ.ರಾಜಾರಾಂ ಅವರನ್ನು ನೇಮಕ ಮಾಡಲಾಗಿದೆ.

ಶಿವಮೊಗ್ಗ ಮತ್ತು ಧಾರವಾಡದಲ್ಲಿ ಸ್ವತಂತ್ರವಾಗಿ ಆರಂಭಿಸುತ್ತಿರುವ ರಂಗಾಯಣಗಳಿಗೂ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಶಿವಮೊಗ್ಗ ರಂಗಾಯಣಕ್ಕೆ ಹೊ.ನಾ.ಸತ್ಯನಾರಾಯಣ, ಧಾರವಾಡ ರಂಗಾಯಣಕ್ಕೆ ಏಣಗಿ ನಟರಾಜ್ ಅವರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.