ಬೆಂಗಳೂರು: ಬಳ್ಳಾರಿ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಸಿಡಿಲು, ಆಲಿಕಲ್ಲು ಸಹಿತ ಅಕಾಲಿಕ ಮಳೆ ಶುಕ್ರವಾರವೂ ಮುಂದುವರಿದಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ ಮೂವರು ಮಹಿಳೆಯರು ಸೇರಿ ನಾಲ್ವರು ಮೃತರಾಗಿದ್ದಾರೆ.
ಬಳ್ಳಾರಿ ವರದಿ: ತಾಲ್ಲೂಕಿನಲ್ಲಿ ರಭಸದಿಂದ ಸುರಿದ ಆಲಿಕಲ್ಲು ಸಹಿತ ಮಳೆಗೆ ಮಹಿಳೆ ಸೇರಿ ಇಬ್ಬರು ಬಲಿಯಾಗಿದ್ದಾರೆ. ಹೊಲದಲ್ಲಿ ಕೆಲಸ ಮುಗಿಸಿ ಎತ್ತಿನ ಗಾಡಿಯಲ್ಲಿ ಮನೆಗೆ ಮರಳುತ್ತಿದ್ದ ತಾಲ್ಲೂಕಿನ ಕಮ್ಮರಚೇಡು ಗ್ರಾಮದ ಲಕ್ಷ್ಮಿ (55) ಆಲಿಕಲ್ಲು ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟರೆ ಸುಂಕಣ್ಣ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗೋಡೆ ಕುಸಿದು ಸಾವು: ನಗರದ ಹೊರ ವಲಯದಲ್ಲಿರುವ ಢಾಬಾ ಒಂದರ ಗೋಡೆಯು ಉರುಳಿದ ಪರಿಣಾಮ ಡೆಹ್ರಾಡೂನ್ ಮೂಲದ ಕಾರ್ಮಿಕ ರಾಜೇಶ್ (45) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬಿರುಗಾಳಿ, ಆಲಿಕಲ್ಲು ಸಮೇತ ಸುರಿದ ಮಳೆಗೆ ಹತ್ತಿ, ಭತ್ತ, ಮೆಕ್ಕಜೋಳ, ಮೆಣಸಿನಕಾಯಿ ಬೆಳೆ ಸರ್ವನಾಶವಾಗಿದೆ. ಅನೇಕ ಮರಗಳು ಧರೆಗೆಉರುಳಿದ್ದು ಹಲವು ಗುಡಿಸಲುಗಳಿಗೆ ಹಾನಿಯಾಗಿದೆ ಎಂದು ಕಮ್ಮರಚೇಡು ಗ್ರಾಮದ ಗಾಳೆಪ್ಪಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಕಮ್ಮರಚೇಡು ಸುತ್ತಮುತ್ತಲಿನ ರೂಪನಗುಡಿ, ಎತ್ತಿನಬೂದಿಹಾಳ, ಶಂಕರಬಂಡೆ, ವಿಘ್ನೇಶ್ವರ ಕ್ಯಾಂಪ್, ಮಂಗಮ್ಮನ ಕ್ಯಾಂಪ್ ಸೇರಿದಂತೆ ಅನೇಕ ಗ್ರಾಮಗಳಲ್ಲೂ ಆಲಿಕಲ್ಲು ಸಮೇತ ಭಾರಿ ಮಳೆ ಸುರಿದಿದೆ.
ನಗರದ ಹೊರವಲಯದಲ್ಲಿರುವ ಮುಂಡ್ರಿಗಿ, ಕೈಗಾರಿಕಾ ಪ್ರದೇಶ ಹಾಗೂ ಬೆಳಗಲ್ ಕ್ರಾಸ್ ಪ್ರದೇಶದಲ್ಲಿ ಮಳೆಯಿಂದಾಗಿ ನೂರಾರು ಗುಡಿಸಲುಗಳು ನೆಲಸಮವಾಗಿವೆ.
ಇಳಕಲ್ (ಬಾಗಲಕೋಟೆ) ವರದಿ: ನಗರ ಹಾಗೂ ಸುತ್ತಮುತ್ತ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಿತು. ತುಂಬ, ಆದಾಪೂರ, ನಂದವಾಡಗಿ, ಓತಗೇರಿ, ಕಂದಗಲ್, ಹಿರೇಕೊಡಗಲಿ ಭಾಗದಲ್ಲಿ ಸಹ ಜೋರಾಗಿ ಮಳೆ ಸುರಿಯಿತು.
ಲಿಂಗಸುಗೂರು (ರಾಯಚೂರು ) ವರದಿ: ತಾಲ್ಲೂಕಿನ ಪೂಲಬಾವಿ, ಗೋನವಾಟ್ಲ ತಾಂಡಾ, ಗುಂತಗೋಳ, ಅಮರೇಶ್ವರ, ದೇವಬೂಪೂರ, ಯರಡೋಣಿ, ಯರಗೋಡಿ, ಯರದರಗಡ್ಡಿ ಗ್ರಾಮ ಹಾಗೂ ಸುತ್ತಮುತ್ತಲಿನ ದೊಡ್ಡಿ ಮತ್ತು ತಾಂಡಾಗಳಿರುವ ಪ್ರದೇಶದಲ್ಲಿ ಆಲಿಕಲ್ಲು ಮಳೆ ಸುರಿದಿದೆ.
ರಸ್ತೆ, ಹಳ್ಳ, ಹೊಲ, ಗದ್ದೆಗಳು ಆಲಿಕಲ್ಲಿನಿಂದ ಆವೃತಗೊಂಡಿವೆ. ಭತ್ತ, ಪಪ್ಪಾಯಿ, ಶೇಂಗಾ, ಮಾವಿನ ತೋಟಗಳು ಆಲಿಕಲ್ಲು ಮಳೆ ಹೊಡೆತಕ್ಕೆ ಹಾಳಾಗಿವೆ. ಆಲಿಕಲ್ಲು ಮಳೆ ಹೊಡೆತದಿಂದ ಕೋಳಿ, ಕುರಿಗಳು ಸಾವನ್ನಪ್ಪಿವೆ ಎಂದು ತಾಂಡಾ, ದೊಡ್ಡಿ ಪ್ರದೇಶದ ಜನ ಹೇಳುತ್ತಿದ್ದಾರೆ.
ಹಿಂದೆಂದೂ ಕಂಡಿಲ್ಲ: ‘ನನ್ನ ಜೀವನದಲ್ಲಿಯೇ ಇಂಥ ಆಲಿಕಲ್ಲು ಮಳೆ ಕಂಡಿಲ್ಲ’ ಎಂದು 70 ವರ್ಷದ ಶಾಂತಮ್ಮ ಹೇಳಿದರು.
ಹಟ್ಟಿ ಸುತ್ತಮುತ್ತಲೂ ಮಳೆ: ಇದೇ ರೀತಿ ತಾಲ್ಲೂಕಿನ ಹಟ್ಟಿ ಗ್ರಾಮದ ಸುತ್ತಮುತ್ತಲೂ ಮಳೆಯಾಗಿದ್ದು, ಅಲ್ಲಿಯೂ ಬೆಳೆ ನಷ್ಟಕ್ಕೆ ರೈತರು ಕಂಗೆಟ್ಟಿದ್ದಾರೆ.
ಗುಂಡ್ಲುಪೇಟೆ (ಚಾಮರಾಜನಗರ) ವರದಿ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಮಹಿಳೆ ಮೃತಪಟ್ಟಿದ್ದಾರೆ. ಗ್ರಾಮದ ಕುನ್ನಯ್ಯ ಅಲಿಯಾಸ್ ರಮೇಶ್ ಅವರ ಪತ್ನಿ ಚಂದ್ರಮ್ಮ (29) ಜಮೀನಿನಲ್ಲಿ ಈರುಳ್ಳಿ ಕಳೆ ತೆಗೆಯುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾರೆ.
ಸರಗೂರು (ಮೈಸೂರು ಜಿಲ್ಲೆ) ವರದಿ: ಎಚ್.ಡಿ. ಕೋಟೆ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಾ (38) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಪ್ರೇಮಾ, ಪತಿ ಚಿನ್ನಯ್ಯ ಸೇರಿದಂತೆ ಆರು ಮಂದಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಎರಗಿದ ಸಿಡಿಲಿಗೆ ಪ್ರೇಮಾ ಸ್ಥಳದಲ್ಲೇ ಮೃತಪಟ್ಟರು.
ಜತೆಯಲ್ಲಿದ್ದ ಶಂಕರಯ್ಯ, ಛಾಯಾ ಮತ್ತು ಕೆಂಪಸಿದ್ದಮ್ಮ ಎಂಬುವರಿಗೂ ಸಿಡಿಲು ಬಡಿದಿದೆ. ಇವರಲ್ಲಿ ಛಾಯಾ ಎಂಬುವರ ಸ್ಥಿತಿ ಗಂಭೀರವಾಗಿದೆ. ಈ ಮೂವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಪುರ (ಚಿತ್ರದುರ್ಗ ಜಿಲ್ಲೆ) ವರದಿ: ಹೋಬಳಿಯ ಸುತ್ತಮುತ್ತ ಶುಕ್ರವಾರ ಸಂಜೆ ಆಲಿಕಲ್ಲು, ಬಿರುಗಾಳಿ ಸಹಿತ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಶ್ರವಣಗೆರೆಯಲ್ಲಿ ವಿದ್ಯುತ್ ಹರಿದು ಆರು ಕುರಿಗಳು ಸತ್ತಿವೆ.
ಹೊಳಲ್ಕೆರೆ ವರದಿ: ತಾಲ್ಲೂಕಿನ ಕೆರೆಯಾಗಳಹಳ್ಳಿಯಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು 10 ಮೇಕೆಗಳು ಸಾವನ್ನಪ್ಪಿವೆ.
ಚಿತ್ರದುರ್ಗ ವರದಿ: ನಗರದ ವಿವಿಧ ಬಡಾವಣೆಗಳಲ್ಲಿ ಮಧ್ಯಾಹ್ನದ ವೇಳೆಗೆ ದಿಢೀರನೆ ಬಿಸಿಲು ಮಳೆ ಸುರಿದು, ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು.
ಜಗಳೂರು ವರದಿ: ಬಿಸಿಲಿನ ಪ್ರಖರತೆಯಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.