ADVERTISEMENT

ಅಕ್ರಮ ಆಸ್ತಿ ಗಳಿಕೆ: ಈಶ್ವರಪ್ಪ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ಅಡಿ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸೋಮವಾರ ಪ್ರಥಮ ತನಿಖಾ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಡಿ. 9ರಂದು ವಿಚಾರಣೆ ನಡೆಸಿದ್ದ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಹಾಗೂ ವಿಶೇಷ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರೂ ಆದ ಆರ್.ಎಂ. ಶೆಟ್ಟರ್ ಫೆ.4ರ ಒಳಗೆ ತನಿಖೆ ನಡೆಸಿ, ವರದಿ ನೀಡುವಂತೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಪಿ.ಒ. ಶಿವಕುಮಾರ್ ಅವರಿಗೆ ಆದೇಶಿಸಿದ್ದರು. ಸೋಮವಾರ ಲೋಕಾಯುಕ್ತ ಡಿವೈಎಸ್‌ಪಿ ಶಿವಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸ್ವೀಕರಿಸಿ ಪ್ರಥಮ ತನಿಖಾ ವರದಿ ದಾಖಲಿಸಿದ್ದಾರೆ.

ಈಶ್ವರಪ್ಪ ತಮ್ಮ ಅಧಿಕಾರ ದುರ್ಬಳಕೆ ಮಾಡಿ, ಮಗ ಕೆ.ಇ. ಕಾಂತೇಶ್ ಮತ್ತು ಸೊಸೆ ಶಾಲಿನಿ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ವಕೀಲ ವಿನೋದ್ ಅವರು ದಾಖಲೆ ಸಮೇತ ದೂರು ನೀಡಿದ್ದರು.

ಈಶ್ವರಪ್ಪ ಅವರ ಆದಾಯದ ಮೂಲಗಳ ಬಗ್ಗೆ ದೂರಿನಲ್ಲಿ ಪ್ರಶ್ನೆ ಮಾಡಿದ್ದ ವಿನೋದ್, ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 13(1) (ಡಿ) (ಇ), ಐಪಿಸಿ ಕಲಂ 120 (ಬಿ) ಹಾಗೂ ಕಲಂ 420ರ ಅಡಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.