ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ ಪರಿಶೀಲನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ರಾಮನಗರ : ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಸಂಗ್ರಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸನಾವುಲ್ಲಾ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಶೀಘ್ರವೇ ಮೂರು ದಿನಗಳ ಪರಿಶೀಲನೆ ನಡೆಯಲಿದೆ.

ರಾಮನಗರದ ನೂತನ ಕಂದಾಯ ಭವನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸನಾವುಲ್ಲಾ ಅವರೇ ಈ ವಿಷಯ ತಿಳಿಸಿದ್ದಾರೆ.

`ಕನಕಪುರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ಸರ್ಕಾರಕ್ಕೆ ವರದಿ ನೀಡಬೇಕಿದೆ. ಹಾಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಅರಣ್ಯ, ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆಗೂಡಿ ಮೂರು ದಿನ ಕನಕಪುರ ಸತ್ತಮುತ್ತ ಸಂಚರಿಸಿ ಕಲ್ಲುಗಣಿಗಾರಿಕೆಯ ವಸ್ತು ಸ್ಥಿತಿಯನ್ನು ಅಧ್ಯಯನ ನಡೆಸಬೇಕಿದೆ~ ಎಂದು ಅವರು ಹೇಳಿದ್ದಾರೆ.

`ಕನಕಪುರ ತಾಲ್ಲೂಕಿನ ಯಾವ ಯಾವ ಭಾಗದಲ್ಲಿ ಯಾವ ರೀತಿಯ ಗಣಿಗಾರಿಕೆ ನಡೆಯುತ್ತಿದೆ. ಅದರ ನಕ್ಷೆ, ಗಣಿಗಾರಿಕೆಯ ಸ್ವರೂಪ ಸೇರಿದಂತೆ ಇತರ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ~ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಲ್ಲದೆ ಈ ಭಾಗದಲ್ಲಿನ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ, ಸಂಘ-ಸಂಸ್ಥೆಗಳಿಂದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆಗೆ ದೂರುಗಳು ಬಂದಿದ್ದರೆ, ಅವುಗಳ ಪ್ರತಿಯನ್ನು ತನಗೆ ಕಳುಹಿಸಿಕೊಡುವಂತೆ ಅವರು ನಿರ್ದೇಶನ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಲ್ಲದೆ ಈ ಭಾಗದಲ್ಲಿನ ಕಲ್ಲು ಗಣಿಗಾರಿಕೆ ಕುರಿತು ಈ ಹಿಂದೆ ಯು.ವಿ.ಸಿಂಗ್ ಅವರು ಸಿದ್ಧಪಡಿಸಿದ್ದ ತನಿಖಾ ವರದಿಯನ್ನು ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.