ADVERTISEMENT

ಅಕ್ರಮ ಗಣಿಗಾರಿಕೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:10 IST
Last Updated 26 ಫೆಬ್ರುವರಿ 2011, 17:10 IST

ಬೆಂಗಳೂರು: ‘ನಿಷೇಧದ ನಡುವೆಯೂ ಬಳ್ಳಾರಿ ಜಿಲ್ಲೆಯ ವಿವಿಧೆಡೆ ನಿರಾತಂಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ’ ಎಂದು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ (ಎನ್‌ಸಿಪಿ          ಎನ್‌ಆರ್) ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಿತಿಯ ವತಿಯಿಂದ ಫೆಬ್ರುವರಿ 15ರಿಂದ 18ರವರೆಗೆ ಸಂಡೂರು ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿರುವ ಮಧ್ಯೆಯೇ ಇಲ್ಲಿಯ ರಾಮಘಡ ಪ್ರದೇಶದಲ್ಲಿ ಸ್ಪಾರ್ಕ್‌ಲೈನ್ ಹಾಗೂ ಆದರ್ಶ ಎಂಟರ್‌ಪ್ರೈಸಸ್ ಗಣಿ ಕಂಪೆನಿಗಳು ತಮಗೆ ನಿಗದಿಪಡಿಸಲಾದ ಭೂಮಿಯಲ್ಲಿ ಗಣಿಗಾರಿಕೆ ನಡೆಸದೇ, ಎರಡೂ ರಾಜ್ಯಗಳ ಗಡಿಯಲ್ಲಿರುವ, ಯಾರಿಗೂ ಹಂಚಿಕೆಯಾಗದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ’ ಎಂದು ದೂರಿದರು.

‘ಬಳ್ಳಾರಿ ಜಿಲ್ಲೆಯ ವಿವಿಧೆಡೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆದಿದ್ದು, ಸಚಿವ ಜಿ.ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ವ್ಯಾಪ್ತಿಯ ಗಣಿಗಾರಿಕೆ ಪ್ರದೇಶದಲ್ಲಿ ಸುರಕ್ಷಾ ಕ್ರಮಗಳಿಲ್ಲದೇ ಇರುವುದರಿಂದ ಇಬ್ಬರು ಕಾರ್ಮಿಕರು ಕಳೆದ ಸೆಪ್ಟೆಂಬರ್‌ನಲ್ಲಿ ದುರಂತ ಸಾವಿಗೀಡಾಗಿದ್ದಾರೆ.

 ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಅಂತರಗಂಗಮ್ಮ ಕೊಂಡ ಪ್ರದೇಶದಲ್ಲಿ ಓಎಂಸಿ ಕಂಪೆನಿ ವ್ಯಾಪ್ತಿಯಲ್ಲಿ ಗಣಿ ಅದಿರು ಸಾಗಾಣಿಕೆ ವಾಹನ ಸಂಚರಿಸಲು ಅಗತ್ಯವಾದ ರಸ್ತೆಯು ಅಗಲವಾಗಿಲ್ಲದೆ ಇರುವುದರಿಂದ ಕಾರ್ಮಿಕರ ಸಾವು ಸಂಭವಿಸಿದೆ. ಈ ಕುರಿತು ಗಣಿ ಸುರಕ್ಷಾ ವಿಭಾಗದ ಉಪ ನಿರ್ದೇಶಕರು ಕಂಪೆನಿ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಿದ್ದಾರೆ’ ಎಂದರು.

ಅಕ್ರಮವೆಂದು ಸಾಬೀತಾದ ಕಂಪೆನಿಗಳಿಂದ ಲೂಟಿಯಾದ ಗಣಿಯ ಮೊತ್ತವನ್ನು ವಾಪಸ್ ಪಡೆದರೆ ಸಾಕಾಗದು. ಈ ಕಂಪೆನಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು. ಸಮಿತಿಯ ಸದಸ್ಯ ರಾಘವೇಂದ್ರ ಕುಷ್ಟಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.