ADVERTISEMENT

ಅಕ್ರಮ ಗಣಿಗಾರಿಕೆ: ತನಿಖಾ ಆಯೋಗ ರಚಿಸಿ

ವಿಧಾನಸಭೆಯಲ್ಲಿ ಕೆಜೆಪಿ ಅಧ್ಯಕ್ಷ ಬಿಎಸ್‌ವೈ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:59 IST
Last Updated 7 ಜೂನ್ 2013, 19:59 IST
ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರಾದ ಸುರೇಶ್‌ಕುಮಾರ್ ಹಾಗೂ ಜಿ.ಎಚ್. ತಿಪ್ಪಾರೆಡ್ಡಿ ಇದ್ದಾರೆ.
ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರಾದ ಸುರೇಶ್‌ಕುಮಾರ್ ಹಾಗೂ ಜಿ.ಎಚ್. ತಿಪ್ಪಾರೆಡ್ಡಿ ಇದ್ದಾರೆ.   

ಬೆಂಗಳೂರು: ಅಕ್ರಮ ಗಣಿಗಾರಿಕೆ, ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಬಿಡಿಎ ನಿವೇಶನಗಳ ಹಂಚಿಕೆ, ಡಿನೋಟಿಫಿಕೇಶನ್ ಪ್ರಕರಣ, ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ಪ್ರಕರಣಗಳ ವಿಚಾರಣೆಗೆ ತನಿಖಾ ಆಯೋಗ ರಚಿಸುವಂತೆ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾ.ಸಂತೋಷ್ ಹೆಗ್ಡೆ ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

`1999ರಿಂದ ಇಲ್ಲಿಯವರೆಗೆ ಯಾರ ಕಾಲದಲ್ಲಿ ಏನೇನು ಆಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಬೇಕು. ವಿರೋಧದ ನಡುವೆಯೂ ಖನಿಜಗಳ ರಫ್ತು ನಿಷೇಧ ಮಾಡಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡೆ. ತನಿಖೆ ಆಗುವ ಮೊದಲೇ ಜೈಲಿಗೆ ಹೋದ ನಿದರ್ಶನ ಪಾಕಿಸ್ತಾನದಲ್ಲೂ ಇಲ್ಲ. ವಿಚಾರಣೆ ನಡೆಯುವ ಮೊದಲೇ ನಮ್ಮ ಪಕ್ಷದವರು ಸಂಚು ನಡೆಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು' ಎಂದು ಅವರು ಆರೋಪಿಸಿದರು.

`ಲೋಕಾಯುಕ್ತರು ವರದಿ ನೀಡಿದ ಕೂಡಲೇ ದೆಹಲಿಗೆ ಬರುವಂತೆ ವರಿಷ್ಠರು ನನಗೆ ಸೂಚಿಸಿದರು. ಮೂರೇ ದಿನದಲ್ಲಿ ರಾಜೀನಾಮೆ ನೀಡಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 24 ದಿನ ಜೈಲಿನಲ್ಲಿ ಇದ್ದೆ. ಖಾಸಗಿ ದೂರಿನ ಮೇಲೆ ವಿಚಾರಣೆ ಇಲ್ಲದೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಮೊದಲ ಪ್ರಕರಣವಿದು. ಅಕ್ರಮ ಗಣಿಗಾರಿಕೆ ತಡೆಯಲು ಮುಂದಾಗಿದ್ದೆ ನನಗೆ ಮುಳುವಾಯಿತು' ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್ ಜಾಮೀನು ನೀಡಿದ ಸಂದರ್ಭದಲ್ಲಿ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಎಳೆಎಳೆಯಾಗಿ ಸದನದಲ್ಲಿ ಬಿಡಿಸಿಟ್ಟ ಯಡಿಯೂರಪ್ಪ, `ಲೋಕಾಯುಕ್ತರು ನನಗೆ ಸಹಜ ನ್ಯಾಯ ಒದಗಿಸಲಿಲ್ಲ. ಲೋಕಾಯುಕ್ತ ವರದಿಯನ್ನು ಸಂಪುಟ ಸಭೆ ಮತ್ತು ಸದನದಲ್ಲಿ ಮಂಡಿಸಬೇಕಾಗಿತ್ತು. ಅದಕ್ಕೆ ಅವಕಾಶ ನೀಡದೆ ಮೂರೇ ದಿನದಲ್ಲಿ ಅಧಿಕಾರದಿಂದ ಕೆಳಗಿಳಿಸಿದರು. ಸದನಕ್ಕೆ ಗೊತ್ತಾಗಲಿ ಎಂಬ ಉದ್ದೇಶದಿಂದ ನನ್ನ ಕರ್ಮಕತೆಯನ್ನು ಪ್ರಸ್ತಾಪಿಸಿದ್ದೇನೆ' ಎಂದರು.

ಹಿಂದಿನ ಸರ್ಕಾರದ ಭ್ರಷ್ಟಾಚಾರದಿಂದ ಕರ್ನಾಟಕವು ತಲೆತಗ್ಗಿಸುವಂತಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಗುರುತರವಾದ ಆರೋಪ ಮಾಡಿರುವುದು ಸರಿಯಲ್ಲ. ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಸದನದಲ್ಲಿ ಮಂಡಿಸಬೇಕು. ಈ ರೀತಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ವೇತಪತ್ರಕ್ಕೆ ಬಿಎಸ್‌ವೈ ಆಗ್ರಹ
ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಆರೋಪ ಮಾಡಲಾಗಿದೆ. ಇದು ನಿಜ ಆಗಿದ್ದರೆ, ಅಧಿಕಾರಕ್ಕೆ ಬಂದ ಕೂಡಲೇ ಆರು ಸಾವಿರ ಕೋಟಿ ರೂಪಾಯಿ ಮೊತ್ತದ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ಹೇಗೆ ಸಾಧ್ಯ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆಯೂ ಅವರು ಆಗ್ರಹಿಸಿದರು.

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ 30 ಕೆ.ಜಿ ಅಕ್ಕಿ ಕೊಡುವುದಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಿದ್ದೀರಾ? ಜುಲೈ ಒಂದರಿಂದ ಅಕ್ಕಿ ಕೊಡದಿದ್ದರೆ ಬೀದಿಗಿಳಿದು ಹೋರಾಟ ಮಾಡಲು ಪ್ರತಿಪಕ್ಷಗಳಿಗೆ ನೀವೇ ಅಸ್ತ್ರ ಒದಗಿಸಿಕೊಟ್ಟಂತಾಗುತ್ತದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.