ADVERTISEMENT

ಅಕ್ರಮ ಗಣಿ ತನಿಖೆಗೆ ಸಿದ್ಧ- ಸಿಬಿಐ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST

ಬೆಂಗಳೂರು:  ರಾಜ್ಯದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸುತ್ತಿರುವ, ಅದಿರನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳ ತನಿಖೆಗೆ ತಾನು ಸಿದ್ಧ ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಬಿಐ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. ಒಂದು ವೇಳೆ ಇದನ್ನು ‘ವಿಶೇಷ ಪ್ರಕರಣ’ ಎಂದು ಕೋರ್ಟ್ ಪರಿಗಣಿಸಿದರೆ ತನಿಖೆಗೆ ತಾನು ಸಿದ್ಧ. ಇದಕ್ಕೆ ರಾಜ್ಯ ಸರ್ಕಾರದ ಅನುಮತಿಯೂ ಅಗತ್ಯ ಇಲ್ಲ ಎಂದು ಸಿಬಿಐ ಲಿಖಿತ ರೂಪದಲ್ಲಿ ಮಾಹಿತಿ ನೀಡಿದೆ.

‘ದೆಹಲಿ ವಿಶೇಷ ಪೊಲೀಸ್ ಕಾಯ್ದೆ-1946ರ 5ನೇ ಕಲಂ ಅನ್ವಯ ಇಂತಹ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರದ ಅನುಮತಿ ಅಗತ್ಯ ಇಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ 2010ರಲ್ಲಿ ನಡೆಸಿದ್ದ ‘ಪಶ್ಚಿಮ ಬಂಗಾಳ ಹಾಗೂ ಸಾರ್ವಜನಿಕ ಹಕ್ಕುಗಳ ರಕ್ಷಣಾ ಸಮಿತಿ’ಯ ಪ್ರಕರಣದ ವಿಚಾರಣೆಯಲ್ಲಿ ಸ್ಪಷ್ಟಪಡಿಸಿದೆ. ಸಿಬಿಐಗೆ ನೆರವು ನೀಡುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸ ಬಹುದು’ ಎಂದು ಸಿಬಿಐ ತಿಳಿಸಿದೆ.

‘ಓಬಳಾಪುರಂ ಮೈನಿಂಗ್ ಕಂಪೆನಿ ಸೇರಿದಂತೆ ಕೆಲವರ ವಿರುದ್ಧ ಸಿಬಿಐ ತಂಡ ಈಗಾಗಲೇ ಭಾರತೀಯ ಅರಣ್ಯ ಕಾಯ್ದೆ, ಗಣಿ ಖನಿಜ ಕಾಯ್ದೆ ಮತ್ತು ಭ್ರಷ್ಟಾಚಾರ ನಿರ್ಮೂಲನ ಕಾಯ್ದೆಗಳ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡಿದೆ. ಇದರಲ್ಲಿ ಸಾರ್ವಜನಿಕ ಸೇವಕರೂ ಸೇರಿದ್ದಾರೆ. ಇದೇ ರೀತಿ ಆರೋಪ ಹೊತ್ತ 5 ಕಂಪೆನಿಗಳ ವಿರುದ್ಧ 2009ರ ಡಿ.7ರಂದು ಪ್ರಥಮ ಮಾಹಿತಿ ವರದಿಯನ್ನೂ ದಾಖಲಿಸಿದೆ. ಇಲ್ಲಿಯೂ ಅದನ್ನು ಅನುಸರಿಸಬಹುದಾಗಿದೆ’ ಎಂದು ಅದು ವಿವರಿಸಿದೆ.

ಅರ್ಜಿದಾರರ ದೂರು: ಅದಿರನ್ನು ಪರವಾನಗಿ ಇಲ್ಲದೇ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕೆಲವು ರಾಜಕಾರಣಿಗಳ ಬೆಂಬಲ ಕೂಡ ಇರುವುದರಿಂದ ಗಣಿ ಲಾಬಿ ನಡೆಯುತ್ತಿದೆ. ಇಷ್ಟಾದರೂ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಕೊಂಡಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

ಬಳ್ಳಾರಿ, ಚಿತ್ರದುರ್ಗ, ತುಮಕೂರು ಹಾಗೂ ರಮಣದುರ್ಗ ಪ್ರದೇಶಗಳ ಅರಣ್ಯ ಪ್ರದೇಶವನ್ನು ಬೇಕಾಬಿಟ್ಟಿಯಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಆಂಧ್ರ ಪ್ರದೇಶದ ಗಡಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಶತಮಾನದಷ್ಟು ಹಳೆಯದಾಗಿರುವ ಬಳ್ಳಾರಿಯ ಸುಗ್ಗಲಮ್ಮ ದೇವಾಲಯವನ್ನು ಸ್ಫೋಟಗೊಳಿಸಲಾಗಿದೆ. ಗಡಿ ಗುರುತನ್ನು ನಾಶ ಮಾಡಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ‘ಅಕ್ರಮ’ ಗಣಿಗಾರಿಕೆ ಎಂಬ ಬಗ್ಗೆ ಕೇಂದ್ರ ಉನ್ನತ ಅಧಿಕಾರ ಸಮಿತಿ ಕೂಡ ವರದಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿವಾದಿಯಾಗಿ ರೆಡ್ಡಿ: ಈ ಅರ್ಜಿಯಲ್ಲಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ವಿರುದ್ಧ ಆರೋಪ ಮಾಡಲಾಗಿದೆ. ಆದರೆ ಅರ್ಜಿಯಲ್ಲಿ ಅವರನ್ನು ಪ್ರತಿವಾದಿಯಾಗಿ ಮಾಡದಿರುವಾಗ ಅವರ ವಿರುದ್ಧ ಈ ರೀತಿ ಆರೋಪ ಮಾಡುವುದು ತರವಲ್ಲ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಅದಕ್ಕೆ, ಈ ಅರ್ಜಿಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಬೇಕೆ ಎಂಬ ಬಗ್ಗೆ ಅರ್ಜಿದಾರರಿಂದ ಮಾಹಿತಿ ಪಡೆಯಲು ಅವರ ಪರ ವಕೀಲರಿಗೆ ಕೋರ್ಟ್ ಜೂನ್ 3ರ ವರೆಗೆ ಕಾಲಾವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.