ADVERTISEMENT

ಅಕ್ರಮ ಹಣ, ಮದ್ಯ, ಕುಕ್ಕರ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 20:36 IST
Last Updated 30 ಮಾರ್ಚ್ 2018, 20:36 IST

ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೆ, ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 1,087 ಪ್ರೆಸ್ಟೀಜ್‌ ಕುಕ್ಕರ್‌ಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಗದಗ ರಸ್ತೆಯ ಪೊಲೀಸ್‌ ಚೆಕ್ ಪೋಸ್ಟ್‌ನಲ್ಲಿ ಒಂದು ಲಾರಿ  ಮತ್ತು ಒಂದು ಟಾಟಾ ಏಸ್‌ ವಾಹನವನ್ನು ತಡೆದ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಆರ್‌.ಗಡ್ಡೇಕರ್‌ ಮತ್ತು ಸಿಬ್ಬಂದಿ, ತಪಾಸಣೆ ಮಾಡಿದಾಗ ಅನಧಿಕೃತವಾಗಿ ಕುಕ್ಕರ್‌ಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ವಶಪಡಿಸಿಕೊಂಡಿರುವ ಕುಕ್ಕರ್‌ಗಳ ಮೌಲ್ಯ ₹28 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ವಾಹನಚಾಲಕರಾದ ಕುಂದಗೋಳ ತಾಲ್ಲೂಕಿನ ಕೂಬಿಹಾಳದ ಪ್ರಕಾಶ ಮಂಟೂರ ಮತ್ತು ಕಲಘಟಗಿ ತಾಲ್ಲೂಕಿನ ಬಸಲಿಂಗ
ನಕೊಪ್ಪದ ಚನ್ನಪ್ಪಗೌಡ ಪಾಟೀಲ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ₹10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

ಮದ್ಯ ಜಪ್ತಿ
ಹಾವೇರಿ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ, ಜಿಲ್ಲೆಯ ವಿವಿಧೆಡೆ ಗುರುವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮ ದಾಸ್ತಾನು ಮಾಡಲಾಗಿದ್ದ ₹1.64 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹2.56 ಲಕ್ಷ ವಶ
ಯಲ್ಲಾಪುರ (ಉತ್ತರ ಕನ್ನಡ): ದಾಖಲೆಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹2.56 ಲಕ್ಷ ನಗದನ್ನು ಯಲ್ಲಾಪುರ ಪೊಲೀಸರು, ತಾಲ್ಲೂಕಿನ ಕಿರವತ್ತಿ ಚೆಕ್‌ಪೋಸ್ಟ್ ಬಳಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಗೋಕಾಕದ ರಾಜು ರಾಠೋಡ ಹಣ ಸಾಗಿಸುತ್ತಿದ್ದ ವ್ಯಕ್ತಿ. ಮಂಗಳೂರಿನಿಂದ ಗೋಕಾಕ ಕಡೆ ತೆರಳುತ್ತಿದ್ದ ಕಾರನ್ನು, ಚುನಾವಣಾ ಅಧಿಕಾರಿಗಳು ಕಿರವತ್ತಿ
ಚೆಕ್‌ಪೋಸ್ಟ್ ಬಳಿಪರಿಶೀಲಿಸಿದಾಗ, ಹಣ ಪತ್ತೆಯಾಗಿದೆ. ವೈದ್ಯಕೀಯ ಉಪಚಾರಕ್ಕೆ ಹಣ ಕೊಂಡೊಯ್ದಿದ್ದಾಗಿ ರಾಠೋಡ ತಿಳಿಸಿದ್ದು, ಸೂಕ್ತ ದಾಖಲೆಗಳಿಲ್ಲದ ಕಾರಣ ಸರ್ಕಾರಿ ಖಜಾನೆಯಲ್ಲಿ ಹಣ ಜಮಾ ಮಾಡಿ. ಹಣ ಸಾಗಿಸುತ್ತಿದ್ದ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ.

ಇಬ್ಬರು ಪೊಲೀಸರ ಅಮಾನತು
ಹಾವೇರಿ: ಚುನಾವಣಾ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಎಚ್.ಟಿ. ಪಾಟೀಲ ಮತ್ತು ಎನ್‌.ಬಿ. ಚಿಕ್ಕಹರಕುಣಿ ಅವರನ್ನು ಅಮಾನತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.