ಬಾಗಲಕೋಟೆ: ಕಬ್ಬು ಪೂರೈಸಿದ ರೈತರಿಗೆ ಎಫ್ಆರ್‌ಪಿ (ಸೂಕ್ತ ಬೆಲೆ) ನೀಡದ ಸಕ್ಕರೆ ಕಾರ್ಖಾನೆಗಳ ಗೋದಾಮು ವಶಕ್ಕೆ ಪಡೆದಿರುವ ಸರ್ಕಾರದ ಕ್ರಮಕ್ಕೆ ಜಿಲ್ಲೆಯ ಕೆಲ ಕಾರ್ಖಾನೆಗಳ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.
ರೈತರಿಗೆ ನೀಡಬೇಕಿರುವ ಬಾಕಿ ಹಣಕ್ಕೆ ಅಗತ್ಯವಿರುವಷ್ಟು ಮಾತ್ರ ಸಕ್ಕರೆಯನ್ನು ವಶಕ್ಕೆ ಪಡೆಯದೇ, ಹೆಚ್ಚಿನ ಸಕ್ಕರೆಯನ್ನು ಸರ್ಕಾರ ವಶಕ್ಕೆ ಪಡೆದಿದೆ ಎಂಬುದು ಕೆಲ ಕಾರ್ಖಾನೆಗ ಮಾಲೀಕರ ಆರೋಪವಾಗಿದೆ. ಈ ಬಗ್ಗೆ ಕೆಲವರು ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೊಂದಲಗಳ ಮಹಾಪೂರ: ರೈತರಿಗೆ ಬಾಕಿ ನೀಡದ ಯಾವಾವ ಕಾರ್ಖಾನೆಯ ಗೋದಾಮಿನಿಂದ ಎಷ್ಟು ಪ್ರಮಾಣದ ಸಕ್ಕರೆ ವಶಕ್ಕೆ ಪಡೆಯಬೇಕು? ಯಾವಾಗ ಟೆಂಡರ್ ಕರೆಯಬೇಕು? ವಶಕ್ಕೆ ಪಡೆದಿರುವ ಸಕ್ಕರೆಯಲ್ಲಿ ಎಷ್ಟು ಪ್ರಮಾಣ ಹರಾಜು ಹಾಕಬೇಕು? ಹೆಚ್ಚುವರಿ ಸಕ್ಕರೆಯನ್ನು ಏನು ಮಾಡಬೇಕು? ಇತ್ಯಾದಿ ಪ್ರಶ್ನೆಗಳಿಗೆ ಸರ್ಕಾರದಿಂದ ಸರಿಯಾದ ಮಾರ್ಗದರ್ಶನ ಬಾರದೇ ಇರುವುದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಸಮಜಾಯಿಷಿ: ‘ಸದ್ಯದ ಸ್ಥಿತಿಯಲ್ಲಿ ಸಕ್ಕರೆ ಬೆಲೆ ಪ್ರತಿ ಟನ್‌ಗೆ ₹ 1900 ಇದೆ, ಹರಾಜು ಹಾಕುವ ಸಂದರ್ಭದಲ್ಲಿ ಯಾವ ದರಕ್ಕೆ ಸಕ್ಕರೆ ಮಾರಾಟವಾಗುತ್ತದೆಯೋ ತಿಳಿಯದು. ಹೀಗಾಗಿ ಕಾರ್ಖಾನೆಗಳ ಗೋದಾಮಿನಲ್ಲಿರುವ ಪೂರ್ಣ ಸಕ್ಕರೆಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲೆಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿಗೆ ಅಗತ್ಯವಿರುವಷ್ಟು ಸಕ್ಕರೆಯನ್ನು ಮಾತ್ರ ಹರಾಜು ಹಾಕಿ, ಉಳಿದ ಸಕ್ಕರೆಯನ್ನು ಕಾರ್ಖಾನೆಗಳ ವಶಕ್ಕೆ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಿಲ್ಲೆಯಲ್ಲಿರುವ ಒಟ್ಟು 9 ಸಕ್ಕರೆ ಕಾರ್ಖಾನೆಗಳು 2013–14ನೇ ಸಾಲಿಗೆ ಸಂಬಂಧಿಸಿದಂತೆ ₹ 200.22 ಕೋಟಿ ಹಾಗೂ 2014–15ನೇ ಸಾಲಿಗೆ ಸಂಬಂಧಿಸಿದಂತೆ ₹ 790.71 ಕೋಟಿ ಸೇರಿದಂತೆ ಒಟ್ಟು ₹ 990.93 ಕೋಟಿ ಹಣ ರೈತರಿಗೆ ನೀಡುವುದು ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.