ADVERTISEMENT

ಅಘೋಷಿತ ಬಂದ್: ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ಯಾದಗಿರಿಯಲ್ಲಿ ಬುಧವಾರ ಮುಸ್ಲಿಂ ಯುವಕರು ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಬಂದ್ ಮಾಡಿಸಿದರು
ಯಾದಗಿರಿಯಲ್ಲಿ ಬುಧವಾರ ಮುಸ್ಲಿಂ ಯುವಕರು ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳನ್ನು ಬಂದ್ ಮಾಡಿಸಿದರು   

ಯಾದಗಿರಿ: ಬಾಬರಿ ಮಸೀದಿ ಧ್ವಂಸ ದಿನವನ್ನು ನಗರದಲ್ಲಿ ಕರಾಳ ದಿನವನ್ನಾಗಿ ಆಚರಿಸುವಂತೆ ಒತ್ತಾಯಿಸಿ ಮುಸ್ಲಿಮರ ಅಂಗಡಿಗಳನ್ನು ಬಂದ್ ಮಾಡಿಸಿ, ಅಘೋಷಿತ ಬಂದ್‌ ಆಚರಣೆಗೆ ಮುಂದಾಗಿದ್ದ ಮುಸ್ಲಿಂ ಯುವಕರ ಗುಂಪಿನ ಮೇಲೆ ಪೊಲೀಸರು ಬುಧವಾರ ಲಘು ಲಾಠಿ ಪ್ರಹಾರ ನಡೆಸಿದರು.

ಬೆಳಿಗ್ಗೆ 11.30 ಗಂಟೆಗೆ ನಗರದ ಟಿಪ್ಪುಸುಲ್ತಾನ್‌ ಸಂಯುಕ್ತರಂಗ ಸಂಘಟನೆಯು ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿತ್ತು.

ಇದೇ ಸಂದರ್ಭದಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡಿದ್ದ 30ಕ್ಕೂ ಹೆಚ್ಚು ಯುವಕರ ಗುಂಪು, ಸರ್ಕಾರಿ ಪದವಿ ಕಾಲೇಜು ಕಡೆಯಿಂದ ಚಿತ್ತಾಪುರ ಸಂಪರ್ಕ ರಸ್ತೆ ಪ್ರವೇಶಿಸಿತು. ನಂತರ ರಸ್ತೆ ಪಕ್ಕದಲ್ಲಿನ ಮುಸ್ಲಿಮರ ಅಂಗಡಿ, ಹೋಟೆಲ್‌ಗಳನ್ನು ಮಾತ್ರ ಮುಚ್ಚಿಸಿ ಅಘೋಷಿತ ಬಂದ್‌, ಕರಾಳ ದಿನ ಆಚ
ರಿಸುವಂತೆ ಒತ್ತಾಯಿಸುತ್ತಾ ಸುಭಾಷ್ ವೃತ್ತದ ಕಡೆ ಸಾಗಿತು. ಈ ದಿಢೀರ್ ಬೆಳವಣಿಗೆಯಿಂದಾಗಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತು.

ADVERTISEMENT

ಇನ್‌ಸ್ಪೆಕ್ಟರ್‌ ಮೌನೇಶ್ವರ ಪಾಟೀಲ ನೇತೃತ್ವದಲ್ಲಿ ಪೊಲೀಸರು, ಮುಸ್ಲಿಂ ಯುವಕರ ಗುಂಪಿನ ಮೇಲೆ ಲಘುಲಾಠಿ ಪ್ರಹಾರ ನಡೆಸಿ ಚದುರಿಸಿದರು.

ಸ್ಥಳಕ್ಕೆ ಬಂದ ಡಿವೈಎಸ್‌ಪಿ ಎಸ್‌.ಪಾಂಡುರಂಗ, ‘ಅಘೋಷಿತ ಬಂದ್‌ ಆಚರಣೆಗೆ ಕುಮ್ಮಕ್ಕು ನೀಡಿದ ಹಾಗೂ ಶಾಂತಿ ಕದಡಲು ಮುಂದಾಗಿದ್ದ ಯುವ
ಕರ ಗುಂಪಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಡಳಿತಕ್ಕೆ ಮನವಿ: ಬಾಬ್ರಿ ಮಸೀದಿ ಧ್ವಂಸ ಖಂಡಿಸಿ ಮತ್ತು ಪ್ರಕರಣ ಶೀಘ್ರ ಇತ್ಯರ್ಥಪಡಿಸುವಂತೆ ಒತ್ತಾಯಿಸಿ ನಗರದ ಟಿಪ್ಪುಸುಲ್ತಾನ್‌ ಸಂಯುಕ್ತ ರಂಗದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ನೇತೃತ್ವದಲ್ಲಿ ಮುಸ್ಲಿಂ ಯುವ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅರ್ಜಿ ಸಲ್ಲಿಸಲು ಅನುಮತಿ ಪಡೆದಿದ್ದರು:  ‘ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಟಿಪ್ಪುಸುಲ್ತಾನ್ ಸಂಯುಕ್ತರಂಗ ಸಂಘಟನೆಯವರು ಅನುಮತಿ ಪಡೆದಿದ್ದರು. ನಗರದಲ್ಲಿ ನಡೆದ ಅಘೋಷಿತ ಬಂದ್ ಕಿಡಿಗೇಡಿಗಳ ಕೃತ್ಯ. ಶಾಂತಿ ಕದಡುವಂತಹ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ನಗರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ಸಜ್ಜನ ತಿಳಿಸಿದರು.

ಒಂದೆಡೆ ವಿಜಯೋತ್ಸವ; ಮತ್ತೊಂದೆಡೆ ಕರಾಳ ದಿನಾಚರಣೆ (ಹುಬ್ಬಳ್ಳಿ/ಧಾರವಾಡ): ಬಾಬರಿ ಮಸೀದಿ ಧ್ವಂಸವಾಗಿ 25 ವರ್ಷಗಳಾದ ನಿಮಿತ್ತ, ಅವಳಿ ನಗರವು ಬುಧವಾರ ವಿಜಯೋತ್ಸವ ಹಾಗೂ ಕರಾಳ ದಿನ ಆಚರಣೆ ಎರಡಕ್ಕೂ ಸಾಕ್ಷಿಯಾಯಿತು.
ಅನುಮತಿ ಪಡೆಯದೇ, ಧಾರವಾಡದ ವಿವೇಕಾನಂದ ವೃತ್ತದಲ್ಲಿ ವಿಜಯೋತ್ಸವಕ್ಕೆ ಮುಂದಾದ ವಿಶ್ವ ಹಿಂದೂ ಪರಿಷತ್‌, ಭಜರಂಗ ದಳದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ವಿಜಯೋತ್ಸವ ಆಚರಣೆಗೆ ಅವಕಾಶ ನಿರಾಕರಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಇದಕ್ಕೂ ಮುನ್ನ, ಇದೇ ವೃತ್ತದಲ್ಲಿ ಕರಾಳ ದಿನಾಚರಣೆಗೆ ಸಜ್ಜಾಗಿದ್ದ ಸಿಪಿಐ, ಸಿಪಿಎಂ ಕಾರ್ಯಕರ್ತರಿಗೂ ಪೊಲೀಸರು ಅವಕಾಶ ನೀಡಲಿಲ್ಲ. ಅವರು ಕೂಡ ಅನುಮತಿ ಪಡೆದಿರಲಿಲ್ಲ.
ಹುಬ್ಬಳ್ಳಿಯ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಕಾರ್ಯಕರ್ತರು, ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಖಂಡಿಸಿದರು.

ಕಪ್ಪು ಬಟ್ಟೆ ಧರಿಸಿದ್ದ ಕೆಲ ಕಾರ್ಯಕರ್ತರು, ‘ಮಸೀದಿಯ ಧ್ವಂಸದಿಂದಾಗಿ, ಶತಮಾನದಿಂದ ಒಂದೇ ಕುಟುಂಬದಂತೆ ಬದುಕುತ್ತಿದ್ದವರ ನಡುವೆ ದ್ವೇಷದ ಹೊಗೆಯಾಡುವಂತಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ ವತಿಯಿಂದ ನಗರದ ಸಹ
ಸ್ರಾರ್ಜುನ ವೃತ್ತದಲ್ಲಿ ಹಣತೆ ಬೆಳಗಿ, ಹನುಮಾನ್‌ ಚಾಲೀಸ್‌ ಪಠಿಸುವ ಮೂಲಕ ಶೌರ್ಯ ದಿನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.