ADVERTISEMENT

ಅಡಿಕೆಗೆ ರೋಗ: ಕೇಂದ್ರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST
ಅಡಿಕೆಗೆ ರೋಗ: ಕೇಂದ್ರಕ್ಕೆ ನೋಟಿಸ್
ಅಡಿಕೆಗೆ ರೋಗ: ಕೇಂದ್ರಕ್ಕೆ ನೋಟಿಸ್   

ಬೆಂಗಳೂರು: ಅಡಿಕೆ ಬೆಳೆ ಹಳದಿ ಎಲೆ ರೋಗಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾರ್ಗ ಹಿಡಿದಿದ್ದು, ಅವರ ನೆರವಿಗೆ ಬರುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ನಾಲ್ಕು ಎಕರೆಗಳಿಗಿಂತ ಕಡಿಮೆ ಪ್ರಮಾಣದ ಜಮೀನು ಹೊಂದಿರುವ ರೈತರು ಪಡೆದುಕೊಂಡಿರುವ ಸಾಲವನ್ನು  ಬ್ಯಾಂಕ್‌ಗಳು ಮನ್ನಾ ಮಾಡುವಂತೆ ಕೃಷಿ ತಜ್ಞ ಡಾ.ಗೋರಕ್‌ನಾಥ್ ಅವರ ನೇತೃತ್ವದ ಸಮಿತಿ ಮಾಡಿರುವ ಶಿಫಾರಸು ಜಾರಿಗೆ ಸರ್ಕಾರಕ್ಕೆ ಆದೇಶಿಸುವಂತೆ ಸಚಿನ್ ಮೀಗಾ ಹಾಗೂ ಇತರರು ಕೋರ್ಟನ್ನು ಕೋರಿದ್ದಾರೆ.
`ರೈತರ ತೊಂದರೆ ಕುರಿತು ಪರಿಶೀಲನೆ  ನಡೆಸಲು ಕೇಂದ್ರ ಸರ್ಕಾರ ಈ ಸಮಿತಿ ರಚನೆ ಮಾಡಿತ್ತು.

2009ರಲ್ಲಿಯೇ ಸಮಿತಿ ಶಿಫಾರಸು ಮಾಡಿದೆ. ಆದರೆ ಇದುವರೆಗೂ ಅದು ಜಾರಿಗೆ ಬಂದಿಲ್ಲ. ಆದುದರಿಂದ ವಿವಿಧ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿರುವ ರೈತರು ಈಗ ಬೆಳೆ ಹಾನಿಯಿಂದ ಬೀದಿಗೆ ಬಂದಿದ್ದಾರೆ. 2003ರಿಂದ ಈಚೆಗೆ 40ಕ್ಕೂ ಅಧಿಕ ರೈತರು ಸಾಲಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ~ ಎನ್ನುವುದು ಅರ್ಜಿದಾರರ ದೂರು.

ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ರೋಗ ಸಾಮಾನ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 40ಸಾವಿರ ಹೆಕ್ಟೇರ್ ತೋಟಗಳ ಪೈಕಿ 20 ಸಾ.ಹೆ; ಶಿವಮೊಗ್ಗ ಜಿಲ್ಲೆಯ 32 ಸಾ.ಹೆ ಜಮೀನಿನ ಪೈಕಿ 8ಸಾವಿರ ಹಾಗೂ ಉಡುಪಿಯ 27 ಸಾ.ಹೆ ಜಮೀನಿನ ಪೈಕಿ 15 ಸಾ.ಹೆ ಜಮೀನಿನಲ್ಲಿ ಈ ರೋಗ ಕಾಣಿಸಿಕೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಹಾಗೂ ವಿವಿಧ ಬ್ಯಾಂಕ್‌ಗಳಿಗೆ ನೋಟಿಸ್ ಜಾರಿಗೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.