ADVERTISEMENT

ಅಡುಗೆ ಅನಿಲ ಪೂರೈಕೆ ಸ್ಥಗಿತ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:00 IST
Last Updated 1 ಫೆಬ್ರುವರಿ 2011, 18:00 IST

ಬೆಂಗಳೂರು: ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಅಡುಗೆ ಅನಿಲ ಕಾರ್ಡ್ ಹಾಗೂ ವಿದ್ಯುತ್ ಮೀಟರ್ ಸಂಖ್ಯೆ ಸೇರಿದಂತೆ ಇತರ ಕೆಲ ದಾಖಲೆಗಳನ್ನು ಬೆಂಗಳೂರಿನ ನಿವಾಸಿಗಳಿಂದ ಸಂಗ್ರಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಈ ದಾಖಲೆ ಒದಗಿಸದ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಅಡುಗೆ ಅನಿಲ ಪೂರೈಕೆಯನ್ನು ನಿಲ್ಲಿಸಬಾರದು ಎಂದು ಆಹಾರ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಇಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದರು.

ರಾಜ್ಯದ 6.25 ಕೋಟಿ ಜನಸಂಖ್ಯೆಗೆ 1.25 ಕೋಟಿ ಕುಟುಂಬಗಳಿವೆ. ಇದರಲ್ಲಿ 15ರಿಂದ 20 ಲಕ್ಷ ಕುಟುಂಬಗಳು ಪಡಿತರ ಚೀಟಿಯನ್ನೇ ಪಡೆದಿಲ್ಲ. ಅಂದಾಜಿನ ಪ್ರಕಾರ 1.05 ಕೋಟಿ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು. ಆದರೆ, ಈಗ ಕೊಟ್ಟಿರುವುದು 1.5  ಕೋಟಿ!. ಇದು ಹೇಗೆ ಆಯಿತು? 35ರಿಂದ 40 ಲಕ್ಷ ಪಡಿತರ ಚೀಟಿಗಳನ್ನು ಹೆಚ್ಚುವರಿಯಾಗಿ ನೀಡಿದ್ದು ಅದನ್ನು ಪತ್ತೆಹಚ್ಚಲು ಎಲ್ಲರ ಸಹಕಾರ ಬೇಕಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ‘ಪಂಚತಂತ್ರ’ ಯೋಜನೆ ಮೂಲಕ ದಾಖಲೆ ಸಂಗ್ರಹಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿರುವವರು ಪಡಿತರ ಚೀಟಿಯ ಮುಖಪುಟದ ಒಂದು ಜೆರಾಕ್ಸ್ ಪ್ರತಿ ಮತ್ತು ಅವರ ಮನೆಯ ಇತ್ತೀಚಿನ ವಿದ್ಯುತ್ ಬಿಲ್, ಅವುಗಳ ಮೇಲೆ ಎಲ್‌ಪಿಜಿ ಬಳಕೆದಾರರ ಸಂಖ್ಯೆಯನ್ನು ಬರೆದು ಕಳುಹಿಸಬೇಕು.
ಪಡಿತರ ಚೀಟಿ ಇಲ್ಲದವರು ತಮ್ಮ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್ ಸಂಖ್ಯೆ ಮತ್ತು ಎಲ್‌ಪಿಜಿ ಬಳಕೆದಾರರ ಸಂಖ್ಯೆಯನ್ನು ಇತ್ತೀಚಿನ ವಿದ್ಯುತ್ ಬಿಲ್ ಜತೆ ಕಳುಹಿಸಬೇಕು.

ಕಳುಹಿಸುವುದು ಹೇಗೆ: ಈ ದಾಖಲೆಗಳನ್ನು ಸಲ್ಲಿಸಲು ಎಲ್ಲೂ ಸಾಲಿನಲ್ಲಿ ನಿಲ್ಲಬೇಕಿಲ್ಲ. ಅಂಚೆ ಅಥವಾ ಫ್ಯಾಕ್ಸ್  ಅಥವಾ ಇಲಾಖೆಯ ವೆಬ್‌ಸೈಟ್ ಮೂಲಕವೇ ಎಲ್ಲ ದಾಖಲೆಗಳನ್ನು ಸಲ್ಲಿಸಬಹುದು ಎಂದು ಶೋಭಾ ಹೇಳಿದರು.

ಅಂಚೆ ವಿಳಾಸ: ಸರ್ಟಿಫಿಕೇಟ್ ಆಫ್ ಪೋಸ್ಟಿಂಗ್ ಮೂಲಕ, ಆಯುಕ್ತರು, ಆಹಾರ ಮತ್ತು ನಾಗರಿಕ  ಸರಬರಾಜು ಇಲಾಖೆ, ಸಂಖ್ಯೆ 8, ಮಾರ್ಕೆಟಿಂಗ್ ಫೆಡರೇಷನ್ ಕಟ್ಟಡ, ಕನ್ನಿಂಗ್‌ಹ್ಯಾಂ ರಸ್ತೆ, ಬೆಂಗಳೂರು-52.ಫ್ಯಾಕ್ಸ್ ಮೂಲಕ ಕಳುಹಿಸುವವರಿಗೆ 22372204.

ಮೇಲೆ ಸೂಚಿಸಿದ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಸ್ಕ್ಯಾನ್ ಮಾಡಿ ಇಲಾಖೆಯ ವೆಬ್‌ಸೈಟ್ ah-ara.kar.nic.in ನಲ್ಲೂ ಸಲ್ಲಿಸಬಹುದು. ಕಂಪ್ಯೂಟರ್‌ನಲ್ಲಿಯೇ ಸ್ವೀಕೃತಿಯನ್ನೂ ಪಡೆಯಬಹುದು.

‘ಈ ಮಾಹಿತಿ ಒದಗಿಸದೆ ಇದ್ದವರಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಬಾರದೆಂದು ಈವರೆಗೆ ಗ್ಯಾಸ್ ವಿತರಕರಿಗೆ ಸೂಚನೆ ನೀಡಿಲ್ಲ. ಈ ಹಿಂದೆ ನೀಡಿದ ಇಲಾಖೆಯ ಪ್ರಕಟಣೆಯಲ್ಲಿ ಮಾಹಿತಿ ಒದಗಿಸದೆ ಇರುವ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದು ಮತ್ತು ಅನಿಲ ಸರಬರಾಜನ್ನು ನಿಲ್ಲಿಸುವಂತೆ ಸೂಚಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಸ್ಥಗಿತಗೊಳಿಸಿ ಎನ್ನುವ ಸೂಚನೆ ಕೊಟ್ಟಿಲ್ಲ ಎಂದು ಶೋಭಾ ಆದೇಶ ನೀಡಿದರು.

‘ಕೊಮೆಟ್’ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು: ಕಂಪ್ಯೂಟರೀಕೃತ ಪಡಿತರ ಚೀಟಿಗಳನ್ನು ವಿತರಿಸಲು 2006ರಲ್ಲೇ ‘ಕೊಮೆಟ್’ ಸಂಸ್ಥೆ ಜತೆ ಒಪ್ಪಂದ ಆಗಿದ್ದು, ಅದು ನಿಯಮ ಪ್ರಕಾರ ಕೆಲಸ ಮಾಡಿಲ್ಲ.ಇದುವರೆಗೂ ಈ ಸಂಸ್ಥೆಗೆ 54 ಕೋಟಿ ರೂಪಾಯಿ ಪಾವತಿಸಿದ್ದು, ದಾಖಲೆಗಳ ಪರಿಶೀಲನೆ ನಂತರ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಆಹಾರ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ತಿಳಿಸಿದರು.

‘ತೊಂಬತ್ತು ದಿನಗಳಲ್ಲಿ ಕಾರ್ಡ್ ವಿತರಿಸುವ ಭರವಸೆಯನ್ನು ಈ ಸಂಸ್ಥೆ ನೀಡಿತ್ತು. ಆದರೆ, ಇನ್ನೂ ಅನೇಕ ಕಡೆ ಪೂರ್ಣ ಪ್ರಮಾಣದಲ್ಲಿ ಕಾರ್ಡ್‌ಗಳ ವಿತರಣೆ ಆಗಿಲ್ಲ’ ಎಂದು ಹೇಳಿದರು.ಹೀಗಾಗಿ ಇದುವರೆಗೂ ಎಷ್ಟು ಮಂದಿಗೆ ಪಡಿತರ ಚೀಟಿ ವಿತರಿಸಲಾಗಿದೆ. ಎಷ್ಟು ಬಾಕಿ ಉಳಿದಿದೆ. ಮಾಹಿತಿ ಏನಿದೆ ಎನ್ನುವುದನ್ನು ಬಲವಂತವಾಗಿ ಆ ಸಂಸ್ಥೆಯಿಂದಲೇ ಪಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.

ಸರ್ಕಾರದಿಂದಲೇ ಕೃಷಿ ಪಂಪ್‌ಸೆಟ್
ಬೆಂಗಳೂರು: ರೈತರಿಗೆ ಇನ್ನು ಮುಂದೆ ಸರ್ಕಾರದ ವತಿಯಿಂದಲೇ ಕೃಷಿ ಪಂಪ್‌ಸೆಟ್‌ಗಳನ್ನು ನೀಡುವ ಬಗ್ಗೆ ಚಿಂತನೆ ನಡೆದಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ರೈತರು ಈಗ ಬಳಸುತ್ತಿರುವ ಪಂಪ್‌ಸೆಟ್‌ಗಳು ತಾಂತ್ರಿಕವಾಗಿ ಉತ್ತಮವಾಗಿಲ್ಲ. ಹೀಗಾಗಿ ಕಡಿಮೆ ವಿದ್ಯುತ್ ಬಳಸುವ ಮೋಟಾರ್‌ಗಳನ್ನು ಸರ್ಕಾರದ ವತಿಯಿಂದಲೇ ಸರಬರಾಜು ಮಾಡಿದರೆ ಅನುಕೂಲ ಎನ್ನುವ ಸಲಹೆ ಬಂದಿದೆ. ಇದರಿಂದ ಹೆಚ್ಚು ಪಂಪ್‌ಸೆಟ್ ಇರುವ ಜಿಲ್ಲೆಯ ಒಂದೊಂದು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿ ಮಾಡಲಾಗುವುದು ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.