ADVERTISEMENT

ಅತ್ಯಾಚಾರ: ಉಪ ನಿರ್ದೇಶಕ ಬಂಧನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಧಾಕೃಷ್ಣ ಅವರನ್ನು ಯಲಹಂಕ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತುಮಕೂರಿನಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸುತ್ತಿರುವ ಮಹಿಳೆಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. `ಶಾಲೆಗೆ ಅನುದಾನ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದೆ. ತನ್ನ ಜತೆ ಸಹಕರಿಸದರೆ ಹಣ ಬಿಡುಗಡೆ ಮಾಡಿಸಿಕೊಡುತ್ತೇನೆ. ಇಲ್ಲದಿದ್ದರೆ ನಿನ್ನ ಶಾಲೆಯನ್ನು ಮುಚ್ಚಿಸುತ್ತೇನೆ ಎಂದು ರಾಧಾಕೃಷ್ಣ ಅವರು ನನಗೆ ಬೆದರಿಕೆ ಹಾಕಿದ್ದರು. ಅನುದಾನದ ಹಣ ನೀಡುವುದಾಗಿ ಕರೆದುಕೊಂಡು ಹೋಗಿ ಯಲಹಂಕ ಸಮೀಪದ ವಸತಿಗೃಹವೊಂದರಲ್ಲಿ ನನ್ನ ಮೇಲೆ ಗುರುವಾರ ಅತ್ಯಾಚಾರ ಎಸಗಿದರು~ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

`ರಾಧಾಕೃಷ್ಣ ಅವರು ಇದೇ ರೀತಿ ಹಲವು ಬಾರಿ ಬೆದರಿಕೆ ಹಾಕಿ ರಾಜ್ಯದ ವಿವಿಧೆಡೆಗೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಅಂತೆಯೇ  ಬೆಂಗಳೂರಿಗೂ ಎರಡು ಬಾರಿ ಕರೆದೊಯ್ದು ಅತ್ಯಾಚಾರ ನಡೆಸಿದ್ದರು ಎಂದು ದೂರುದಾರರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ~ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ ತಿಳಿಸಿದರು.


`ಘಟನೆ ಸಂಬಂಧ ಅತ್ಯಾಚಾರ ಹಾಗೂ ಜಾತಿನಿಂದನೆ ಪ್ರಕರಣ ದಾಖಲಿಸಿಕೊಂಡು ರಾಧಾಕೃಷ್ಣ ಅವರನ್ನು ಬಂಧಿಸಲಾಗಿದೆ. ದೂರು ನೀಡಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯರು ವರದಿ ನೀಡಿದ ನಂತರ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ~ ಎಂದು ಅವರು ಹೇಳಿದರು.

`ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಧೀಶರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹಕ್ಕೆ ಕರೆದೊಯ್ಯಲಾಗಿದೆ~ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT