ADVERTISEMENT

ಅದಿರು ಕಳವು ಆರೋಪ ಪ್ರಕರಣ: ಉದ್ಯಮಿ ಗೋಯಲ್ ಬಂಧನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST
ಅದಿರು ಕಳವು ಆರೋಪ ಪ್ರಕರಣ: ಉದ್ಯಮಿ ಗೋಯಲ್ ಬಂಧನ
ಅದಿರು ಕಳವು ಆರೋಪ ಪ್ರಕರಣ: ಉದ್ಯಮಿ ಗೋಯಲ್ ಬಂಧನ   

ತಿಪಟೂರು: ಗಣಿ ಉದ್ಯಮಿ ವಿನೋದ್ ಗೋಯಲ್ ಅವರನ್ನು ಅದಿರು ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ಬೆಂಗಳೂರಿನಲ್ಲಿ ಸೋಮವಾರ ಬಂಧಿಸಿದ್ದು, ಪ್ರಕರಣದ ವಿಚಾರಣೆ ನಡೆಸುತ್ತಿರುವ ತಿಪಟೂರಿನ ಸಿವಿಲ್ ಪ್ರಧಾನ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಕೀಲ ವಿನೋದ್‌ಕುಮಾರ್ ಬೆಂಗಳೂರಿನ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಗೋಯಲ್ ಮೂರನೇ ಆರೋಪಿ. ಪ್ರಕರಣದ ಸಂಬಂಧ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸೋಮವಾರ ಆದೇಶ ಪ್ರಕಟಿಸಲು ನ್ಯಾಯಾಲಯ ಸಮಯ ನಿಗದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆಯೇ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಆರೋಪಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಮಾಹಿತಿ ಅರಿತ ತಿಪಟೂರು ಗ್ರಾಮಾಂತರ ಪೊಲೀಸರು ಅಲ್ಲಿಗೆ ಬಂದಿದ್ದರು. ಮಧ್ಯಾಹ್ನದ ವಿರಾಮದ ವೇಳೆ ನ್ಯಾಯಾಲಯದ ಆವರಣದಲ್ಲಿ ಓಡಾಡುತ್ತಿದ್ದ ಗೋಯಲ್ ಬಂಧಿಸಿ ಕರೆದೊಯ್ದರು. ಸಂಜೆ 5 ಗಂಟೆ ವೇಳೆಗೆ ಗ್ರಾಮಾಂತರ ಠಾಣೆಗೆ ಕರೆತಂದು ಅಲ್ಲಿಂದ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಗಣಿ ಉದ್ಯಮಿಯನ್ನು ನ್ಯಾಯಾಲಯಕ್ಕೆ ಕರೆತರುವುದನ್ನು ತಿಳಿದ ವಕೀಲರು, ಸಾರ್ವಜನಿಕರು ನ್ಯಾಯಾಲಯದ ಹೊರಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಗೋಯಲ್ ಪರ ವಕೀಲರು ತಕ್ಷಣ ಜಾಮೀನು ಅರ್ಜಿ ಸಲ್ಲಿಸಿದರು. ಆದರೆ ಇಬ್ಬರು ಸ್ಥಳೀಯರ ಜಮೀನು ದಾಖಲೆ ಮತ್ತು ಸಮ್ಮತಿ ಪತ್ರಗಳನ್ನು ಒದಗಿಸಲು ವಕೀಲರು ಪರದಾಡಿದರು. ಸಂಜೆ 6 ಗಂಟೆ ವೇಳೆಗೆ ಸಿವಿಲ್ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಆರ್.ಪಿ.ಗೌಡ ಅವರು ಆರೋಪಿಗೆ ಜಾಮೀನು ಮಂಜೂರು ಮಾಡಿದರು.
ಟ್ವೆಂಟಿ ಫಸ್ಟ್ ಸೆಂಚುರಿ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ಜಂತಕಲ್ ಮೈನಿಂಗ್ ಹಾಗೂ ಹನುಮಾನ್ ಮೈನ್ಸ್ ಮಾಲೀಕ ವಿನೋದ್ ಗೋಯಲ್ ಅವರಿಗೆ ಅದಿರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿತ್ತು.

ತಾಲ್ಲೂಕಿನ ರಜಾತಾದ್ರಿಪುರ ಗಣಿ ಪ್ರದೇಶದಲ್ಲಿ ಹನುಮಾನ್ ಮೈನ್ಸ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ 500 ಟನ್‌ನಷ್ಟು ಕಬ್ಬಿಣದ ಅದಿರನ್ನು ತಹಶೀಲ್ದಾರ್ ವಿಜಯಕುಮಾರ್ ಮತ್ತು ಗಣಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ ವಶಪಡಿಸಿಕೊಂಡ ದಾಸ್ತಾನಿನಲ್ಲಿ ಸುಮಾರು 200 ಟನ್ ಅದಿರನ್ನು ಮಾಲೀಕರು ಕದ್ದು ಮಾರಿಕೊಂಡಿದ್ದಾರೆಂದು ಆರೋಪಿಸಿ 2010 ಆಗಸ್ಟ್ 5ರಂದು ಗೋಯಲ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆರು ಬಾರಿ ಬಂಧನ ವಾರೆಂಟ್ ಜಾರಿಗೊಳಿಸಲಾಗಿತ್ತು. ಇದೇ ನ್ಯಾಯಾಲಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ಪರಿಸರ ನಾಶಕ್ಕೆ ಸಂಬಂಧಿಸಿದ ಪ್ರಕರಣ ಎದುರಿಸುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.