ADVERTISEMENT

ಅಧ್ಯಕ್ಷರ ಪತ್ನಿಗೆ ಅಡಿಗಡಿಗೆ ಪ್ರೀತಿ!

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಮಡಿಕೇರಿ: ಸಮ್ಮೇಳನಕ್ಕೆ ಎಂದು ಇಲ್ಲಿಗೆ ಬಂದಿರುವ ಸಮ್ಮೇಳನಾಧ್ಯಕ್ಷ ನಾ.­ಡಿಸೋಜ ಅವರ ಪತ್ನಿ ಫಿಲೋಮಿನಾ ಅವರಿಗೆ ಅಡಿಗಡಿಗೆ ಪ್ರೀತಿ ಹರಿಯುತ್ತಿದೆ. ಕನ್ನಡಿಗರ ಪ್ರೀತಿಯ ಮಹಾಪೂರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದೇನೆ ಎನ್ನುತ್ತಾರೆ ಅವರು.

‘ನಾ. ಡಿಸೋಜ ಅವರು ಮೆರವಣಿಗೆಯಲ್ಲಿ ಹೋಗುವುದು ಕಂಡಾಗ ಖುಷಿಯಿಂದ ಕಣ್‌ ತಂಬಿ ಬಂತು. ಕನ್ನಡಿಗರ ಪ್ರೀತಿ ಕಂಡು ಹೃದಯ ತುಂಬಿ ಬಂದಿದೆ. ಜೀವನ ಸಾರ್ಥಕ ಅನ್ನಿಸಿತು...’ ಎಂದು ಹೇಳಿ ಅವರು ಸುಮ್ಮನಾದರು. ಮತ್ತೆ ಸಂಭ್ರಮದಿಂದ ‘ಪ್ರಜಾವಾಣಿ’ಯೊಂದಿಗೆ ಬುಧವಾರ ಮಾತನಾಡಿದರು.

‘ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಕೇಳಿದ ಕೂಡಲೇ ನಮ್ಮ ಮಕ್ಕಳಾದ ಶೋಭಾ, ನವೀನ್ ಹಾಗೂ ಸಂತೋಷ್‌ಗೆ ಹೇಳಿ ಖುಷಿಪಟ್ಟೆ. ಸಮ್ಮೇಳನದ ಅಂಗವಾಗಿ ಮಂಗಳವಾರ ನಡೆದ ಮೆರವಣಿಗೆಯಲ್ಲಿ ಅವರೊಂದಿಗೆ ಹೊರಟಿದ್ದೆ. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಬಂದರೆಂದು ವಾಹನ ಇಳಿದೆ. ಯಾರೂ ನನ್ನನ್ನು ಇಳಿಸಲಿಲ್ಲ. ಇಳಿದ ಮೇಲೆ ಮತ್ತೆ ಹತ್ತಬೇಕೆಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್‌ ಅವರು ಬಂದು ಒತ್ತಾಯ ಮಾಡಿದರು. ಕಾಲಿಗೆ ಬಿದ್ದರು. ಅವರಿಗೆ ಗೌರವ ಕೊಡುವ ಸಲುವಾಗಿ ಮತ್ತೆ ವಾಹನ ಹತ್ತಿದೆ. ಡಿಸೋಜ ಅವರ ಆರೋಗ್ಯದ ಬಗ್ಗೆ ನನಗೆ ಗೊತ್ತಿದೆ. ಹೀಗಾಗಿ ಮೆರವಣಿಗೆ ಉದ್ದಕ್ಕೂ ಅವರೊಂದಿಗೆ ಇದ್ದೆ. ಮಡಿಕೇರಿ ನಮ್ಮೂರಲ್ಲ. ಆದರೆ, ಇಲ್ಲಿಯ ಜನರ ಪ್ರೀತಿ ಕಂಡು ಖುಷಿಯಾಗಿದೆ. ‘ನಾಡಿ’ ಸಾಹಿತ್ಯ ಸೇವೆಗೆ ಒಳ್ಳೆಯ ಗೌರವ ಸಿಕ್ಕಿದೆ. ಮೂರು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈಗ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷತೆಯ ಗರಿ. ಆಯ್ಕೆಯಾದ ಕೂಡಲೇ ನಾಡಿನ ಅನೇಕ ಮಠಾಧೀಶರು ಅವರಿಗೆ ಪತ್ರ ಬರೆದು ಅಭಿನಂದಿಸಿದರು. ಅದನ್ನು ಓದಿ ಸಂತೋಷಪಟ್ಟೆ.

‘ನಾ. ಡಿಸೋಜ ಎನ್ನುವ ಹೆಸರೇ ಪ್ರಿಯವಾದುದು. ಹೀಗಾಗಿ ಮದುವೆಗೆ ಮುಂಚೆ ನನ್ನ ಎಡಗೈ ಮೇಲೆ ನಾ. ಡಿಸೋಜ ಎನ್ನುವ ಹೆಸರಿನ ಹಚ್ಚೆ ಹಾಕಿಸಿಕೊಂಡೆ. ಅದು ಅವರ ಸಾಹಿತ್ಯದ ಅಭಿಮಾನಿ ಎನ್ನುವ ಕಾರಣಕ್ಕೆ...’

‘ನನ್ನ ಅತ್ತೆಯ ಮಗ ಅವರು. ಹೀಗಾಗಿ ಮದುವೆಗೆ ಮೊದಲೇ ಅವರು ಗೊತ್ತಿದ್ದರು. ಮನೆಯಲ್ಲಿ ನಮ್ಮ ಮದುವೆ ಮಾಡಬೇಕೆಂದು ಮಾತನಾಡಿ­ಕೊಳ್ಳುತ್ತಿದ್ದರು. ಪಿಯುಸಿ ಓದಿದ ನಾನು, ಮದುವೆಗೆ ಮೊದಲೇ ಅವರ ಪುಸ್ತಕಗಳನ್ನು ಓದಿ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡೆ. ಮದುವೆಯ ನಂತರ ಅವರು ಕೇಳಿದರು– ಹಚ್ಚೆ ಹಾಕಿಸಿ­ಕೊಂಡಿದ್ದಿಯಲ್ಲ! ಮದುವೆ­ಯಾಗದೆ ಇದ್ದರೆ ಏನು ಮಾಡುತ್ತಿದ್ದಿ ಎಂದು. ಆಗ ನಾನು ಹೇಳಿದೆ – ‘ಮದುವೆಯಾಗಲಿ, ಆಗದಿರಲಿ ಅಭಿಮಾನಕ್ಕಾಗಿ ಹಚ್ಚೆ ಹಾಕಿಸಿಕೊಂಡೆ. ಮದುವೆಯಾಗದೆ ಇದ್ದರೆ ಅಭಿಮಾನಿಯಾಗಿಯೇ ಉಳಿಯುತ್ತಿದ್ದೆ. ಹಚ್ಚೆ ಹಾಗೆಯೇ ಉಳಿಯುತ್ತಿತ್ತು ಎಂದು ಉತ್ತರ ಕೊಟ್ಟಿದ್ದೆ’ ಎಂದರು.

‘ಅವರು ಸರಳ, ಶಿಸ್ತಿನ ಮನುಷ್ಯ. ಹಿತಮಿತ ಮಾತು. ಯಾರನ್ನೂ ಬೈಯ್ದದ್ದು ಗೊತ್ತಿಲ್ಲ. ಎಲ್ಲ ಕಡೆ ನನ್ನನ್ನು ಕರ್ಕೊಂಡು ಹೋಗುತ್ತಾರೆ. 1959­ರಲ್ಲಿ ನಮ್ಮ ಮದುವೆ ಆಯಿತು. ಅವರು ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಿ. ಬಹಳ ಕೆಲಸದ ಒತ್ತಡದ ಜತೆಗೆ ಬರವಣಿಗೆ ಮಾಡುತ್ತಿದ್ದರು. ಹೀಗಾಗಿ ಮನೆಯ ಜವಾಬ್ದಾರಿ ವಹಿಸಿಕೊಂಡೆ.

ನಮ್ಮ ಊರಾದ ಸಾಗರದಲ್ಲಿ ಡಿಸೋಜ ಅವರಿಗೆ ಯಾರೂ ತಾರತಮ್ಯ ಮಾಡುವುದಿಲ್ಲ. ಈ ಸಮ್ಮೇಳನದಲ್ಲೂ ಅಷ್ಟೆ, ಅವರನ್ನು ಪ್ರೀತಿ, ಗೌರವದಿಂದ ಕಂಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?

ಡಿಸೋಜ ಅವರ ಮೊದಲ ಓದುಗಳು ನಾನು. ಅವರು ಓದು ಎಂದು ಹೇಳುವುದಿಲ್ಲ. ನಾನೇ ಓದುವೆ. ಅನೇಕ ಬಾರಿ ಸಲಹೆ ನೀಡಿರುವೆ. ಚರ್ಚ್‌ನಲ್ಲಿ ನಡೆದ ಘಟನೆಯನ್ನು ಅವರಿಗೆ ಹೇಳಿದಾಗ ‘ದೇವರು ಮನೆಗೆ ಬಂದಿದ್ದ’ ಕಥೆ ಬರೆದರು.

ಅವರ ಹೆಸರಿನ ಮಚ್ಚೆ ಹಾಕಿಸಿಕೊಂಡ ಮೊದಲನೆಯ ಹಾಗೂ ಕೊನೆಯ ಮಹಿಳೆ ನಾನೇ ಇರಬೇಕು... ಎಂದು ನಗುತ್ತಲೇ  ಹೇಳಿ ಮಾತು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.