ADVERTISEMENT

ಅನಧಿಕೃತ ಶಾಲೆ ಪತ್ತೆಗೆ ಇಲಾಖೆ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ಬೆಂಗಳೂರು: ರಾಜಧಾನಿಯೂ ಸೇರಿದಂತೆ ರಾಜ್ಯದ ವಿವಿಧೆಡೆ ಅನುಮತಿ ಪಡೆಯದೆ ನಡೆಸುತ್ತಿರುವ ಶಾಲೆಗಳನ್ನು ಪತ್ತೆಹಚ್ಚಿ ಮುಚ್ಚಿಸುವ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸೂಚನೆಯಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲೆಗಳನ್ನು ಗುರುತಿಸಿ ನೋಟಿಸ್ ನೀಡಲು ಮುಂದಾಗಿದ್ದಾರೆ.

ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ, ಬೀದರ್ ಸೇರಿದಂತೆ ಕೆಲವೆಡೆ ಅನುಮತಿ ಪಡೆಯದ ಶಾಲೆಗಳು ಇರುವುದನ್ನು ಈಗಾಗಲೇ ಪತ್ತೆ ಹಚ್ಚಿ ನೋಟಿಸ್ ನೀಡಲಾಗಿದೆ. ಇನ್ನೂ ಕೆಲವೆಡೆ ಅಂತಹ ಶಾಲೆಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಅನುಮತಿ ಪಡೆಯದ 11 ಶಾಲೆಗಳನ್ನು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಆ ಶಾಲೆಗಳ ಮುಂದೆ ಸೂಚನಾ ಫಲಕವನ್ನು ಅಳವಡಿಸಿ, ಮಕ್ಕಳನ್ನು ಶಾಲೆಗೆ ಸೇರಿಸದಂತೆ ಪೋಷಕರಿಗೆ ಮನವಿ ಮಾಡಲಾಗಿದೆ ಎಂದು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ವಿ.ವೆಂಕಟೇಶಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಮೂಲಸೌಕರ್ಯಗಳು ಇಲ್ಲದೆ ಇದ್ದರೂ, ಹಣ ಮಾಡುವ ಉದ್ದೇಶದಿಂದ ಪೌಲ್ಟ್ರಿ ಶೆಡ್‌ನಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ಆಂಧ್ರಪ್ರದೇಶ, ಕೇರಳ ರಾಜ್ಯದವರು ಇಲ್ಲಿ ಬಂದು ಶಾಲೆಗಳನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶ ಅವರಿಗೆ ಇಲ್ಲ. ಹಣ ಮಾಡುವುದೇ ಅವರ ಮುಖ್ಯ ಉದ್ದೇಶ ಎಂದು ಅವರು ವಿವರಿಸಿದರು.

ಈಗ ನೋಟಿಸ್ ನೀಡಿರುವ 11 ಶಾಲೆಗಳ ಪೈಕಿ 3-4 ಶಾಲೆಗಳು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದವು. ಆದರೆ, ಮೂಲಸೌಕರ್ಯಗಳು ಇಲ್ಲದೆ ಇರುವುದರಿಂದ ಮಾನ್ಯತೆ ನೀಡಿಲ್ಲ. ಶಾಲೆಗಳನ್ನು ಮುಚ್ಚುವಂತೆ ನೋಟಿಸ್ ನೀಡಿರುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಐಸಾಕ್ ನ್ಯೂಟನ್ ಶಾಲೆಯವರು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕ್ರಿಮಿನಲ್ ಕೇಸ್ ದಾಖಲಾಗಿರುವ ಶಾಲೆಗಳಿಗೆ ತಲಾ 50 ಸಾವಿರ ರೂಪಾಯಿ ದಂಡ, ಆರು ತಿಂಗಳ ಶಿಕ್ಷೆ ವಿಧಿಸಲು 1983ರ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶ ಇದೆ ಎಂದು ತಿಳಿಸಿದರು.

ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 27, ಉತ್ತರ ಜಿಲ್ಲೆಯಲ್ಲಿ 52, ಬೀದರ್ ಜಿಲ್ಲೆಯಲ್ಲಿ 31 ಖಾಸಗಿ ಶಾಲೆಗಳು ಅನುಮತಿ ಪಡೆದಿಲ್ಲ. ಅಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬಾರದು ಎಂದು ಪೋಷಕರಿಗೆ ಮನವಿ ಮಾಡಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಆ ಶಾಲೆಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಅನುಮತಿ ಪಡೆಯದ ಶಾಲೆಗಳನ್ನು ಇನ್ನೂ ಗುರುತಿಸಿಲ್ಲ. ಮೈಸೂರು, ಚಾಮರಾಜನಗರ, ಕೋಲಾರ, ಗುಲ್ಬರ್ಗ ಜಿಲ್ಲೆಯಲ್ಲಿ ಮಾಹಿತಿ ತರಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ ಎಂದು ಆಯಾ ಜಿಲ್ಲಾ ಉಪ ನಿರ್ದೇಶಕರು ತಿಳಿಸಿದರು.

ಬಾಗಲಕೋಟೆ, ಹಾವೇರಿ, ಗದಗ, ಉಡುಪಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೊಪ್ಪಳ ಜಿಲ್ಲೆಗಳಲ್ಲಿ ಅನುಮತಿ ಪಡೆಯದ ಶಾಲೆಗಳು ಇಲ್ಲ ಎಂದು ಉಪ ನಿರ್ದೇಶಕರು ತಿಳಿಸಿದರು. ವಿಜಾಪುರ ಜಿಲ್ಲೆಯಲ್ಲಿ ಒಂದು ಶಾಲೆ ಇತ್ತು. ಅದನ್ನು ಮುಚ್ಚಿಸಲಾಗಿದೆ ಎಂದು ಆ ಜಿಲ್ಲೆಯ ಉಪ ನಿರ್ದೇಶಕರು ಹೇಳಿದರು. ಉಳಿದ ಜಿಲ್ಲೆಗಳ ಉಪ ನಿರ್ದೇಶಕರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

1983ರ ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರತಿಯೊಂದು ಶಾಲೆಯೂ ನೋಂದಣಿ ಮಾಡಿಸಬೇಕು. ಹೊಸದಾಗಿ ಶಾಲೆ ಆರಂಭಿಸಲು ಮುಂದೆ ಬರುವವರು ಮೊದಲು ಅನುಮತಿ ಪಡೆದು ಶಾಲೆ ತೆರೆಯಬೇಕು. ಒಂದು ವರ್ಷದ ಒಳಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಎರಡನೇ ವರ್ಷದಲ್ಲಿ ಮಾನ್ಯತೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

ತರಬೇತಿ ಪಡೆದ ಶಿಕ್ಷಕರು, ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳು, ಅಗತ್ಯವಿರುವ ಕೊಠಡಿಗಳು, ಆಟದ ಮೈದಾನ, ಪೀಠೋಪಕರಣಗಳು ಇತ್ಯಾದಿ ಸೌಲಭ್ಯಗಳನ್ನು ಹೊಂದಿದ್ದರೆ ಮಾನ್ಯತೆ ನೀಡಲಾಗುತ್ತದೆ. ಆಡಳಿತ ಮಂಡಳಿಗಳು ಕಲ್ಪಿಸಿರುವ ಸೌಕರ್ಯಗಳು ತೃಪ್ತಿಕರವಾಗಿಲ್ಲದಿದ್ದರೆ ಮಾನ್ಯತೆ ನೀಡುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಕಾಲಾವಕಾಶ ನೀಡಲಾಗುತ್ತದೆ. ಇಷ್ಟಾದರೂ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ತೋರಿದರೆ ಶಾಲೆಗಳನ್ನು ಮುಚ್ಚುವಂತೆ ನೋಟಿಸ್ ನೀಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಎಸ್.ಆರ್. ಉಮಾಶಂಕರ್ ತಿಳಿಸಿದರು.

ಪಕ್ಕದ ಶಾಲೆಗಳಿಗೆ ಸೇರ್ಪಡೆ
ಅನುಮತಿ ಪಡೆಯದ ಶಾಲೆಗಳನ್ನು ಮುಚ್ಚಿದ ನಂತರ, ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನು ಅಕ್ಕಪಕ್ಕದ ಶಾಲೆಗಳಿಗೆ ಸೇರಿಸಲಾಗುತ್ತದೆ. ಶಾಲೆ ಅನುಮತಿ ಪಡೆದಿಲ್ಲ ಎಂದು ಗೊತ್ತಾದರೆ ಯಾವ ಪೋಷಕರೂ ತಮ್ಮ ಮಕ್ಕಳನ್ನು ಅಂತಹ ಶಾಲೆಗಳಿಗೆ ಸೇರಿಸುವುದಿಲ್ಲ. ಆದ್ದರಿಂದ ಶೈಕ್ಷಣಿಕ ವರ್ಷದ ಆರಂಭದಲ್ಲೇ ಇಂತಹ ಶಾಲೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಶಾಲೆ ತೆರೆಯುವ ಮುನ್ನ ನೋಂದಣಿ ಮಾಡಿಸಿದ್ದರೂ, ಮೂಲಸೌಕರ್ಯಗಳು ಇದ್ದರಷ್ಟೇ ಮಾನ್ಯತೆ ನೀಡಲಾಗುತ್ತದೆ.
- ಎಚ್.ವಿ.ವೆಂಕಟೇಶಪ್ಪ, ಉಪ ನಿರ್ದೇಶಕರು

ಆಡಳಿತ ಮಂಡಳಿಗಳ ನಿರ್ಲಕ್ಷ್ಯ
ಬಹುತೇಕ ತಾಲ್ಲೂಕುಗಳಲ್ಲಿ ಅನುಮತಿ ಪಡೆಯದ ಶಾಲೆಗಳನ್ನು ಈಗಾಗಲೇ ಗುರುತಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಕೆಲವೊಮ್ಮೆ ಆಡಳಿತ ಮಂಡಳಿಗಳ ನಿರ್ಲಕ್ಷ್ಯದಿಂದಾಗಿ ಅನುಮತಿ ಪಡೆದಿರುವುದಿಲ್ಲ. ನೋಟಿಸ್ ಜಾರಿ ಮಾಡಿದ ನಂತರ ಅನುಮತಿ ಪಡೆದುಕೊಂಡ ನಿದರ್ಶನಗಳು ಇವೆ.

ಶಾಲೆಗಳು ಅನುಮತಿ ಪಡೆಯುವುದು ಕಡ್ಡಾಯ. ಇಲ್ಲದೆ ಇದ್ದರೆ ಅಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ಎಸ್ಸೆಸ್ಸೆಲ್ಸಿಗೆ ಬಂದಾಗ ಪರೀಕ್ಷೆ ಬರೆಯಲು ತೊಂದರೆ ಆಗುತ್ತದೆ. ಸಾಮಾನ್ಯವಾಗಿ ಅನಧಿಕೃತ ಶಾಲೆಗಳನ್ನು ಅಧಿಕೃತಗೊಳಿಸಿಕೊಳ್ಳಲು ಕಾಲಾವಕಾಶ ನೀಡಲಾಗುತ್ತದೆ. ಇದಾದ ನಂತರವೂ ಅಧಿಕೃತ ಮಾಡಿಕೊಳ್ಳದಿದ್ದರೆ ನೋಟಿಸ್ ನೀಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ.
-ಎಸ್.ಆರ್.ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.