ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಇನ್ನೇನು ಕೈಜಾರಲಿದೆ ಎನ್ನುವ ಹಂತದಲ್ಲಿ ಜತೆಯಲ್ಲಿದ್ದ ತಮ್ಮ ಆಪ್ತ ಸಚಿವರು ಮತ್ತು ಶಾಸಕರಿಗೆ ಡಿ.ವಿ.ಸದಾನಂದ ಗೌಡ ಅವರು ಗುರುವಾರ ರಾತ್ರಿ `ಅನುಗ್ರಹ~ದಲ್ಲಿ ಔತಣ ಕೂಟ ಆಯೋಜಿಸಿದ್ದರು.
ಸಚಿವರಾದ ಗೋವಿಂದ ಕಾರಜೋಳ, ಬಾಲಚಂದ್ರ ಜಾರಕಿಹೊಳಿ, ಬಿ.ಎನ್.ಬಚ್ಚೇಗೌಡ, ಸಿ.ಪಿ.ಯೋಗೇಶ್ವರ್, ವರ್ತೂರು ಪ್ರಕಾಶ್, ಅಪ್ಪಚ್ಚು ರಂಜನ್, ಎಸ್.ಎ.ರವೀಂದ್ರನಾಥ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ 35ಕ್ಕೂ ಹೆಚ್ಚು ಶಾಸಕರು ಔತಣಕೂಟದಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಬೇಳೂರು ಗೋಪಾಲಕೃಷ್ಣ ಅವರು ಸದಾನಂದಗೌಡರು ಆಯೋಜಿಸಿದ್ದ ಔತಣ ಕೂಟದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಸಿಟ್ಟಾಗಿರುವ ಅವರು ಕರುಣಾಕರ ರೆಡ್ಡಿ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಭಿನ್ನಮತೀಯ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.
ಗೌಡರ ಜತೆ ಇದ್ದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಚಿವರಾದ ಎಸ್.ಸುರೇಶಕುಮಾರ್, ಸೊಗಡು ಶಿವಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಎ.ರಾಮದಾಸ್ ಸೇರಿದಂತೆ ಇನ್ನೂ ಕೆಲವರು ಔತಣ ಕೂಟಕ್ಕೆ ಗೈರುಹಾಜರಾಗಿದ್ದರು ಎನ್ನಲಾಗಿದೆ. `ಊಟಕ್ಕೆ ಸೇರಿದ್ದು ಬಿಟ್ಟರೆ ಯಾವುದೇ ರಾಜಕೀಯ ಚರ್ಚಿಸಲಿಲ್ಲ~ ಎಂದು ಸಚಿವರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.