ADVERTISEMENT

ಅನುಮಾನ ಇಟ್ಕೋಬೇಡಿ, ಮುಂದಿನ ಅವಧಿಗೂ ಸಮ್ಮಿಶ್ರ ಸರ್ಕಾರವೇ ಬರುತ್ತೆ: ಎಚ್‌ಡಿಕೆ

ರೈತರ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿದೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:38 IST
Last Updated 6 ಜೂನ್ 2018, 12:38 IST
ಎಚ್‌.ಡಿ.ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)
ಎಚ್‌.ಡಿ.ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)   

ಬೆಂಗಳೂರು: ನಮ್ಮ ಸರ್ಕಾರ ಐದು ವರ್ಷ ಬಾಳಿಕೆ ಬರುವ ಬಗ್ಗೆ ಯಾವ ಅನುಮಾನವನ್ನೂ ಇಟ್ಟುಕೊಳ್ಳಬೇಡಿ. ಮುಂದಿನ ಅವಧಿಗೂ ನಮ್ಮ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸುಭದ್ರ ಆಡಳಿತ ಕೊಡುವ ವಿಚಾರದಲ್ಲಿ ಎರಡೂ ಪಕ್ಷಗಳು ಬದ್ಧವಾಗಿವೆ ಎಂದರು.

ರೈತರ ಸಾಲಮನ್ನಾ ಮಾಡುವ ಕುರಿತು ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ. ಸಾಲಮನ್ನಾಕ್ಕೆ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚೆ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ ಎಂದರು

ADVERTISEMENT

ಅನ್ನಭಾಗ್ಯ ಸೇರಿದಂತೆ ಹಿಂದಿನ ಸರ್ಕಾರ ಆರಂಭಿಸಿರುವ ಉಪಯುಕ್ತ ಯೋಜನೆಯಗಳನ್ನು ಮುಂದುವರೆಸುತ್ತೇವೆ. ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು (ಕಾಮನ್ ಮಿನಿಮಮ್ ಪ್ರೋಗ್ರಾಂ) ರೂಪಿಸುತ್ತೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ನನ್ನ ಆದ್ಯತೆ ಎಂದು ನುಡಿದರು.

ಬಿಜೆಪಿ ನಾಯಕರು ತಮ್ಮ ರಾಜಕೀಯ ಬೆಳವಣಿಗೆಗಾಗಿ ಸಾಮಾಜಿಕ ವಾತಾವರಣ ಹಾಳುಮಾಡುತ್ತಿದ್ದಾರೆ. ರಾಜ್ಯದ ಜನತೆಗೆ ರಕ್ಷಣೆ ಕೊಡಲು ಸರ್ಕಾರ ಬದ್ಧವಾಗಿದೆ. ಯಾರನ್ನೂ ನಾವು ಟಾರ್ಗೆಟ್ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ‘ಚುನಾವಣೆ ನಡೆದಾಗ ಎರಡೂ ಪಕ್ಷಗಳು ಎರಡು ಪ್ರತ್ಯೇಕ ಪ್ರಣಾಳಿಕೆಗಳನ್ನು ಜನರ ಮುಂದೆ ಇಟ್ಟಿದ್ದವು. ಈಗ ಎರಡೂ ಪ್ರಣಾಳಿಕೆಗಳು ಮುಖ್ಯ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಗುರುತಿಸಿ ಅನುಷ್ಠಾನಗೊಳಿಸುತ್ತೇವೆ' ಎಂದರು.

‘ಇಂಧನ ಇಲಾಖೆಯನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಯಾವುದೇ ಗೊಂದಲ ಇಲ್ಲ. ಇಂದು ಈ ಕುರಿತು ನಾವು ಯಾರೊಂದಿಗೂ ಚರ್ಚಿಸಲೂ ಇಲ್ಲ. ಈ ಸರ್ಕಾರ ಐದು ವರ್ಷ ಆಡಳಿತ ಕೊಡುವ ಬಗ್ಗೆ ಯಾರೂ ಅನುಮಾನ ಇಟ್ಟುಕೊಳ್ಳಬೇಡಿ' ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಮಾಧ್ಯಮಗಳಿಗೆ ಕಿವಿಮಾತು

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಹುತೇಕ ವಿಷಯಗಳು ಮಾಧ್ಯಮಗಳನ್ನೇ ಉದ್ದೇಶಿಸಿದ್ದವು.

‘ಸ್ವತಂತ್ರವಾಗಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದರೂ ಇಂಥ ಗೊಂದಲಗಳು ಕಂಡುಬರುತ್ತಿದ್ದವು. ಈಗ ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಅದನ್ನು ದೊಡ್ಡದಾಗಿ ತೋರಿಸುತ್ತಿದ್ದೀರಿ’ ಎಂದು ಇಬ್ಬರೂ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.