ADVERTISEMENT

ಅನುಸೂಯಾ ಜಯಂತಿಗೆ ಭಕ್ತೆಯರ ದಂಡು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST
ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಸಂಘಪರಿವಾರದ ನೇತೃತ್ವದಲ್ಲಿ ಅನುಸೂಯಾ ಜಯಂತಿ ಪ್ರಯುಕ್ತ ಮಹಿಳಾ ಭಕ್ತರು ಸಂಕೀರ್ತನಾ ಯಾತ್ರೆ ನಡೆಸಿದರು.
ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಸಂಘಪರಿವಾರದ ನೇತೃತ್ವದಲ್ಲಿ ಅನುಸೂಯಾ ಜಯಂತಿ ಪ್ರಯುಕ್ತ ಮಹಿಳಾ ಭಕ್ತರು ಸಂಕೀರ್ತನಾ ಯಾತ್ರೆ ನಡೆಸಿದರು.   

ಚಿಕ್ಕಮಗಳೂರು:  ಸಂಘ ಪರಿವಾರ ನೇತೃತ್ವದ ದತ್ತಜಯಂತಿಗೆ ಪೂರಕವಾಗಿ ಎರಡು ದಿನಗಳ ಮೊದಲು ಇನಾಂ ದತ್ತಾತ್ರೇಯ ಪೀಠದಲ್ಲಿ ಅನುಸೂಯಾ ಜಯಂತಿ ಮತ್ತು ನಗರದಲ್ಲಿ ಸಂಕೀರ್ತನಾ ಯಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆದವು.

ನಗರದ ಬೋಳರಾಮೇಶ್ವರ ದೇವಸ್ಥಾನದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ದತ್ತಾತ್ರೇಯಸ್ವಾಮಿ ಮತ್ತು ಅನುಸೂಯಾದೇವಿ ಭಜನೆ ಮಾಡುತ್ತಾ ಐ.ಜಿ.ರಸ್ತೆ ಮಾರ್ಗವಾಗಿ ಸಂಕೀರ್ತನಾ ಯಾತ್ರೆ ನಡೆಸಿದರು. ಕೆಲ ಮಹಿಳೆಯರು ಕೇಸರಿ ಸೀರೆ ಧರಿಸಿದ್ದರೆ, ಇನ್ನು ಕೆಲವರು ಕೊರಳಲ್ಲಿ ಕೇಸರಿ ಶಾಲುಗಳನ್ನು ಧರಿಸಿ, ಕೈಯಲ್ಲಿ ಭಗವಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಅನುಸೂಯಾದೇವಿ ಭಾವಚಿತ್ರ ಮತ್ತು ದತ್ತ ವಿಗ್ರಹ ಪ್ರತಿಷ್ಠಾಪಿಸಿದ್ದ ಅಡ್ಡೆಯನ್ನು ಸಂಘ ಪರಿವಾರದ ಮುಖಂಡರು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿದರು. ಕಾಮಧೇನು ಗಣಪತಿ ದೇವಸ್ಥಾನದವರೆಗೂ ಸಂಕೀರ್ತನೆ ಯಾತ್ರೆ ನಡೆಯಿತು.

ನಂತರ ಐ.ಡಿ.ಪೀಠಕ್ಕೆ ತೆರಳಿದ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದತ್ತಾತ್ರೇಯ ಸ್ವಾಮಿ ಪಾದುಕೆಗಳ ದರ್ಶನ ಪಡೆದರು. ಬೆಳಿಗ್ಗೆ 8 ಗಂಟೆಯಿಂದಲೇ ಪಾದುಕೆಗಳ ದರ್ಶನಕ್ಕೆ ಭಕ್ತರು  ಕಾದಿದ್ದರು. ಸಂಜೆಯವರೆಗೂ ಪೀಠಕ್ಕೆ ಭಕ್ತರ ಆಗಮನ ನಿರಂತರವಾಗಿತ್ತು. ಸಂಕೀರ್ತನಾ ಯಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ಕಂಡುಬಂತು. ಹಾಸನ, ಮಂಡ್ಯ, ಚಾಮರಾಜನಗರ, ಬೆಂಗಳೂರು, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿಯಿಂದ ಸಂಘ ಪರಿವಾರದ ಮಹಿಳೆಯರು ಮತ್ತು ದತ್ತಾತ್ರೇಯ ಭಕ್ತರು ಆಗಮಿಸಿದ್ದರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಹಿಳೆಯರಿಗೂ ಸಂಘ ಪರಿವಾರದ ಮಹಿಳಾ ಮುಖಂಡರು ಅರಿಸಿನ, ಕುಂಕುಮ, ಹಸಿರು ಬಳೆ ನೀಡಿ, ಸ್ವಾಗತಿಸಿದರು.

ಐ.ಡಿ.ಪೀಠದ ನಿಷೇಧಿತ ವಲಯದ ಹೊರಗೆ ಸ್ಥಾಪಿಸಿರುವ ತಾತ್ಕಾಲಿಕ ಶೆಡ್‌ನಲ್ಲಿ ಅವಧಾನಿ ರಘು ಅವರ ನೇತೃತ್ವದಲ್ಲಿ ಅನುಸೂಯಾ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆದವು. ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಪ್ರಮುಖ್ ಲಕ್ಷ್ಮಿಕಾಂತ್ ಇನ್ನಿತರರು ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬೆಂಗಳೂರಿನ ಶ್ರೀಧರ ಮಠದ ದತ್ತ ಅವಧೂತರು, ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹಾಗೂ ಸಂಘ ಪರಿವಾರದ ಮುಖಂಡರಾದ ಜಯರಾಮ್, ಕೆ.ಪಿ.ಹೆಬ್ಬಾರ್, ಶಿವಶಂಕರ್, ಪ್ರೇಮ್‌ಕಿರಣ್ ಇನ್ನಿತರರು ಪೀಠದ ಹೊರಗೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ನಗರ ಮತ್ತು ದತ್ತ ಪೀಠದ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಸರ್ಪಗಾವಲು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.