ADVERTISEMENT

ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರ ಮೇಲ್ದರ್ಜೆಗೆ

ಸುವರ್ಣ ಸಂಭ್ರಮದಲ್ಲಿ ಡಾ.ಅಯ್ಯಪ್ಪನ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST

ಮಡಿಕೇರಿ: ಇಲ್ಲಿಗೆ ಸಮೀಪದ ಅಪ್ಪಂಗಳದಲ್ಲಿರುವ ಸಂಬಾರ ಬೆಳೆಗಳ ಸಂಶೋಧನಾ ಕೇಂದ್ರದ ಅಧೀನಕ್ಕೆ ಒಳಪಟ್ಟ ಏಲಕ್ಕಿ ಸಂಶೋಧನಾ ಕೇಂದ್ರವನ್ನು ಪ್ರಾದೇಶಿಕ ಸಂಶೋಧನಾ ಕೇಂದ್ರದ ಸ್ಥಾನಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಇಲಾಖೆಯ (ಡಿಎಆರ್‌ಇ) ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಪ್ರಧಾನ ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು.

ಅಪ್ಪಂಗಳ ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
 
ದೇಶದ ಕೆಲವೇ ಕೆಲವು ಉತ್ತಮ ಸಂಶೋಧನಾ ಕೇಂದ್ರಗಳಲ್ಲಿ ಈ ಕೇಂದ್ರವೂ ಒಂದು. ಅತ್ಯುತ್ತಮ ಹೊಸ ಏಲಕ್ಕಿ ತಳಿಗಳನ್ನು ಇಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಕೇಂದ್ರವು ನೀಡಿರುವ ಕೊಡುಗೆಯನ್ನು ಗಮನಿಸಿ ಪ್ರಾದೇಶಿಕ ಸಂಶೋಧನಾ ಕೇಂದ್ರ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು. 
 
ಹೆಚ್ಚು ಫಸಲು ನೀಡುವ ಅಪ್ಪಂಗಳ-1, ಐಐಎಸ್‌ಆರ್ ವಿಜೇತ ಹಾಗೂ ಐಐಎಸ್‌ಆರ್ ಅವಿನಾಶ್ ಎಂಬ ಮೂರು ಹೊಸ ಏಲಕ್ಕಿ ತಳಿಯನ್ನು ಈ ಕೇಂದ್ರವು ನೀಡಿದ್ದು, ಏಲಕ್ಕಿ ಬೆಳೆಗಾರರಿಗೆ ಸಹಾಯ ಮಾಡಿದೆ ಎಂದು ಅವರು ಶ್ಲಾಘಿಸಿದರು.
 
ವಿದೇಶಗಳಲ್ಲಿರುವ ನಡೆಯುತ್ತಿರುವ ಸಂಶೋಧನೆಗೆ ಸರಿಸಮವಾಗಿ ನಮ್ಮಲ್ಲಿಯೂ ಗುಣಮಟ್ಟದ ಸಂಶೋಧನೆಗಳು ನಡೆಯುತ್ತಿವೆ. ದುರದೃಷ್ಟಕರವೆಂದರೆ ಪ್ರಯೋಗಾಲಯದಲ್ಲಿ ದೊರೆಯುವ ಫಲಿತಾಂಶ ಜಮೀನುಗಳಲ್ಲಿ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಸಂಶೋಧಕರು ಇನ್ನಷ್ಟು ಪ್ರಯತ್ನ ಮಾಡಬೇಕಾಗಿದೆ ಎಂದು ಕರೆ ನೀಡಿದರು.
 
ವಿದೇಶಕ್ಕೆ ಬೆಳೆಗಾರರು:  ಏಲಕ್ಕಿಗೆ ಮಾರಕವಾಗಿರುವ ಕಟ್ಟೆರೋಗವನ್ನು ನಿಯಂತ್ರಿಸಲು ಸಂಶೋಧಕರು ಬೆಳೆಗಾರರ ಜೊತೆ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ. ತಮ್ಮ ಜ್ಞಾನ ಹಾಗೂ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
 
ತೋಟಗಾರಿಕಾ ಬೆಳೆಗಳ ಕುರಿತಂತೆ ವಿದೇಶಗಳಲ್ಲಿ ನಡೆಯುತ್ತಿರುವ ಸಂಶೋಧನೆ ಹಾಗೂ ಹೊಸ ವಿಧಾನಗಳ ಬಗ್ಗೆ ಅಭ್ಯಸಿಸಲು ಹೊರಟಾಗ ಸ್ಥಳೀಯ ಬೆಳೆಗಾರರನ್ನು ಹಾಗೂ ಕೃಷಿ ವಿದ್ಯಾರ್ಥಿಗಳನ್ನೂ ಕರೆದೊಯ್ಯಲು ಚಿಂತನೆ ನಡೆದಿದೆ. ಅದರಂತೆ, ಕಾಫಿ ತೋಟಗಳಲ್ಲಿ ಕರಿಮೆಣಸು ಹಾಗೂ ಏಲಕ್ಕಿಯನ್ನು ಹೇಗೆ ಯಶಸ್ವಿ ಮಿಶ್ರಬೆಳೆಯಾಗಿ ಬೆಳೆಯಬಹುದು ಎನ್ನುವುದನ್ನು ತೋರಿಸಲು ಕೊಡಗಿನ ತೋಟಗಳಿಗೆ ಬೇರೆ ರಾಜ್ಯಗಳ ಬೆಳೆಗಾರರು ಹಾಗೂ ಕೃಷಿ ವಿದ್ಯಾರ್ಥಿಗಳನ್ನು ಕರೆ ತರಲಾಗುವುದು ಎಂದು ಹೇಳಿದರು. 
 
ಬೆಳೆಗೆ ತಕ್ಕಂತೆ ಬೆಲೆ ಸಿಗದಿರುವ ಕಾರಣ ಹಾಗೂ ಇತರೆ ಕಾರಣಗಳಿಗಾಗಿ ಇಂದು ಹಲವರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡಗಿನಲ್ಲಿ ಹಲವು ಹಿರಿಯ ಅಧಿಕಾರಿಗಳು ನಿವೃತ್ತಿಯಾದ ನಂತರ ಕೃಷಿಗೆ ಇಳಿದಿದ್ದಾರೆ. ಈ ಸಂದೇಶ ದೇಶದೆಲ್ಲೆಡೆ ಹರಡಬೇಕಾಗಿದೆ ಎಂದು ಅವರ ನುಡಿದರು.
 
ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ (ಐಐಎಚ್ ಆರ್) ನಿರ್ದೇಶಕ ಡಾ.ಅಮ್ರಿಕ್ ಸಿಂಗ್ ಸಿಧು, ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ (ಸಿಪಿಸಿಆರ್‌ಐ) ಮಾಜಿ ನಿರ್ದೇಶಕರಾದ ಡಾ. ಕೆ.ವಿ. ಅಹ್ಮದ್ ಬಾವಪ್ಪ, ಡಾ. ಎನ್.ಎಂ. ನಾಯರ್, ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಡಾ. ಆರ್. ನಾಯ್ಡು,  ಇತರರು ಮಾತನಾಡಿದರು.
 
ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ    (ಐಐಎಸ್    ಆರ್) ನಿರ್ದೇಶಕ ಡಾ. ಎಂ.ಆನಂದರಾಜ್ ಸ್ವಾಗತಿಸಿದರು. ಐಐಎಸ್‌ಆರ್ ಪ್ರಧಾನ ಸಂಚಾಲಕ ಡಾ.ಜಾನ್ ಅಕಾರಿಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.