ADVERTISEMENT

ಅಮಾವಾಸ್ಯೆ:22 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:56 IST
Last Updated 10 ಏಪ್ರಿಲ್ 2013, 19:56 IST

ಬೆಂಗಳೂರು: ರಾಜ್ಯದಲ್ಲಿ ಮೊದಲ ದಿನ ಜವಳಿ ಸಚಿವ ವರ್ತೂರು ಪ್ರಕಾಶ್ (ಪಕ್ಷೇತರ) ಸೇರಿದಂತೆ 22 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಬಹುತೇಕರು ಪಕ್ಷೇತರ ಅಭ್ಯರ್ಥಿಗಳು.

ಬುಧವಾರ ಚುನಾವಣೆಯ ಅಧಿಸೂಚನೆ ಹೊರ ಬೀಳುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 224 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮೊದಲ ದಿನವೇ ನಾಮಪತ್ರಗಳ ಸಲ್ಲಿಕೆಯಾಗಿದೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ವರ್ತೂರು ಪ್ರಕಾಶ್, ಈ ಬಾರಿಯೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿಲ್ಲ. ಅಮಾವಾಸ್ಯೆ ಕಾರಣ ಮೊದಲ ದಿನ ನಾಮಪತ್ರಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಆಸಕ್ತಿ ತೋರಿಲ್ಲ. ಯುಗಾದಿ ಪ್ರಯುಕ್ತ ಗುರುವಾರ ಸರ್ಕಾರಿ ರಜೆ. ಹೀಗಾಗಿ ನಾಮಪತ್ರ ಸಲ್ಲಿಸಲು ಅವಕಾಶ ಇರುವುದಿಲ್ಲ.

ಏ.14ರಂದು ಭಾನುವಾರ. ಅಂದೂ ನಾಮಪತ್ರ ಸಲ್ಲಿಸಲು ಅವಕಾಶ ಇಲ್ಲ. ಒಟ್ಟು ಐದು ದಿನ ಮಾತ್ರ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇದೆ. ಬಸವನಗುಡಿ, ಹೆಬ್ಬಾಳ, ಬ್ಯಾಟರಾಯನಪುರ, ಶಾಂತಿನಗರ, ಚಾಮರಾಜನಗರ, ಕಲಘಟಗಿ, ಹೊಸದುರ್ಗ, ಚನ್ನಪಟ್ಟಣ, ಕೃಷ್ಣರಾಜ, ಗೌರಿಬಿದನೂರು, ಚಾಮರಾಜ, ರಾಯಚೂರು, ವಿಜಾಪುರ ಹಾಗೂ ಕೆ.ಜಿ.ಎಫ್ ಕ್ಷೇತ್ರಗಳಲ್ಲಿ ಬುಧವಾರ ನಾಮಪತ್ರಗಳು ಸಲ್ಲಿಕೆಯಾಗಿವೆ.

ಎಸ್‌ಯುಸಿಐ (ಸಿ) ಕಣಕ್ಕೆ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಸ್‌ಯುಸಿಐ ಅಭ್ಯರ್ಥಿಗಳಾದ ಬಿ.ಎಸ್.ಪ್ರತಿಭಾ ಕುಮಾರಿ (ರಾಜಾಜಿನಗರ), ಂ.ಎಸ್.ಪ್ರಕಾಶ್ (ಮಲ್ಲೇಶ್ವರಂ), ಎನ್.ರವಿ (ಬಸವನಗುಡಿ) ನಾಮಪತ್ರ ಸಲ್ಲಿಸಿದ್ದಾರೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದ (ಕಮ್ಯೂನಿಸ್ಟ್) ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಡಾ.ಬಿ.ಆರ್. ಮಂಜುನಾಥ್ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಟಿ.ಎನ್.ಕಮಲ್, ರಾಜಾಜಿನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಕೆ.ವಿಜಯಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.