ADVERTISEMENT

ಅಮೃತಭೂಮಿಯಲ್ಲಿ ಅರಳಿದ ದೇಸಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2013, 19:59 IST
Last Updated 13 ಫೆಬ್ರುವರಿ 2013, 19:59 IST
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಸಮೀಪದ ಅಮೃತಭೂಮಿಯಲ್ಲಿ ಬುಧವಾರ ನಡೆದ ರೈತೋತ್ಸವದಲ್ಲಿ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ದಂಪತಿ ಸಮಾಧಿಗೆ ಪುಷ್ಪನಮನ ಸಲ್ಲಿಸಲಾಯಿತು. ಮೇಧಾ ಪಾಟ್ಕರ್, ದೇವನೂರ ಮಹಾದೇವ, ಚುಕ್ಕಿ ನಂಜುಂಡಸ್ವಾಮಿ ಇತರರು ಹಾಜರಿದ್ದರು
ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಸಮೀಪದ ಅಮೃತಭೂಮಿಯಲ್ಲಿ ಬುಧವಾರ ನಡೆದ ರೈತೋತ್ಸವದಲ್ಲಿ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ದಂಪತಿ ಸಮಾಧಿಗೆ ಪುಷ್ಪನಮನ ಸಲ್ಲಿಸಲಾಯಿತು. ಮೇಧಾ ಪಾಟ್ಕರ್, ದೇವನೂರ ಮಹಾದೇವ, ಚುಕ್ಕಿ ನಂಜುಂಡಸ್ವಾಮಿ ಇತರರು ಹಾಜರಿದ್ದರು   

ಅಮೃತಭೂಮಿ (ಚಾಮರಾಜನಗರ ಜಿಲ್ಲೆ): ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ ಬಳಿಯ ಅಮೃತಭೂಮಿಯಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 77ನೇ ಜಯಂತಿ ಹಾಗೂ ಗ್ರಾಮ ಸ್ವರಾಜ್ಯ ಕೇಂದ್ರದ ಉದ್ಘಾಟನಾ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.

`ರೈತೋತ್ಸವ'ದ ಹೆಸರಿನಡಿ ನಡೆಯುತ್ತಿರುವ ಈ ಕಾರ್ಯಕ್ರಮ ಜಾಗತೀಕರಣ ವಿರುದ್ಧದ ದಿಟ್ಟಹೋರಾಟಕ್ಕೆ ಮುನ್ನುಡಿ ಬರೆಯಿತು. `ಎಲ್ಲ ಸಂಘಟನೆಗಳ ಹೋರಾಟ ಒಂದು ಹಂತಕ್ಕೆ ಬಂದು ಸುಸ್ತಾಗಿದೆ. ಮಹಿಳಾ ಸಂಘಟನೆಗಳು, ಯುವಜನರು ಮಾತ್ರ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ಸೂಚಿಸುವರೇ ಎಂದು ಎದುರು ನೋಡುತ್ತಿದ್ದೇನೆ. ಅವರಿಗೆ ನಾವೆಲ್ಲರೂ ಬೆಂಬಲ ನೀಡಬೇಕಿದೆ' ಎಂದು ದೇವನೂರ ಮಹಾದೇವ ಹೇಳಿದರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಸುಳಿಗೆ ಸಿಲುಕಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನಕ್ಕೂ ರೈತೋತ್ಸವ ವೇದಿಕೆಯಾಯಿತು. ಕುಲಾಂತರಿ ತಳಿಗಳಿಂದ ದೇಸಿ ತಳಿಗಳಿಗೆ ಎದುರಾಗಿರುವ ಆಪತ್ತಿನ ಬಗ್ಗೆಯೂ ಚರ್ಚೆ ನಡೆಯಿತು. ಈ ನಡುವೆ ರೈತ ಸಂಘದ ಕಾರ್ಯಕರ್ತರು ಕಂಚರ ಹಿಡಿದು ಕುಲಾಂತರಿ ತಳಿಗಳ ಬಗ್ಗೆ ಹೇಳಿದ ಹಾಡು ಬಹುರಾಷ್ಟ್ರೀಯ ಕಂಪೆನಿಗಳ ಷಡ್ಯಂತ್ರ  ಬೆತ್ತಲೆಗೊಳಿಸಿತು.

`ಆಹಾ... ಹಂದಿಗೂ ಬದನೆಕಾಯಿಗೂ ಮದುವೆಯಂತೆ; ಟ್ಯೂಬ್‌ನಲ್ಲಿ ಲ್ಯಾಬ್‌ನೊಳಗೆ ಶೋಭನವಂತೆ; ಡಬ್ಲ್ಯುಟಿಒ ಪುರೋಹಿತರಿಂದ ಮಂತ್ರಘೋಷವಂತೆ... ಎಂದ ಕಾರ್ಯಕರ್ತರು, `..ಅಮೆರಿಕದ ವೈಟ್‌ಹೌಸ್‌ನಲ್ಲಿ ಹನಿಮೂನ್ ಅಂತೆ ' ಎಂದಾಗ ಅತಿಥಿಗಳು ಹಾಗೂ ರೈತರಿಂದ ಚಪ್ಪಾಳೆ ಮೊಳಗಿತು.

ಕೇರಳದ ಆದಿವಾಸಿ ಚಳವಳಿ ರೂವಾರಿ ಸಿ.ಕೆ.ಜಾನು, ಮೇಧಾ ಪಾಟ್ಕರ್, ದೇವನೂರ ಮಹಾದೇವ, ಮಾಜಿ ಶಾಸಕ ವಾಟಾಳ್ ನಾಗರಾಜ್ ವೇದಿಕೆಯಲ್ಲಿ ನಂಜುಂಡಸ್ವಾಮಿ ಅವರ ವ್ಯಕ್ತಿತ್ವ, ಸಾಧನೆ ಕುರಿತು ಮಾತನಾಡುವಾಗ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆಯಾಗಿರುವ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಭಾವುಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.