ಬೆಂಗಳೂರು: ಅರಣ್ಯದಲ್ಲಿ ನೆಲೆಸಿರುವ ಬುಡಕಟ್ಟು ಮತ್ತು ಪಾರಂಪರಿಕ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಜವಾಬ್ದಾರಿಯನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೇ ವಹಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಕ್ಕುಪತ್ರದಿಂದಾಗಿ ರಾಜ್ಯದ 9 ಜಿಲ್ಲೆಗಳ 26 ತಾಲ್ಲೂಕುಗಳಲ್ಲಿನ ಅರಣ್ಯವಾಸಿಗಳಿಗೆ ಅನುಕೂಲ ಆಗಲಿದೆ.
‘ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವುದು) 2006ರ ಕಾಯ್ದೆ’– ಪ್ರಕಾರ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮಸಭೆಗಳು ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಬೇಕು. ಆ ಸಮಿತಿಗಳು ಹಕ್ಕು ಪತ್ರ ಯಾರಿಗೆ ನೀಡಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಈ ಬಗ್ಗೆ ತಕರಾರು ಇದ್ದರೂ ಅದನ್ನು ಉಪ ವಿಭಾಗ ಮತ್ತು ಜಿಲ್ಲಾ ಮಟ್ಟದಲ್ಲಿನ ಸಮಿತಿಗಳ ಮುಂದೆ ಪ್ರಶ್ನಿಸಬಹುದು ಎಂದು ಅವರು ಹೇಳಿದರು.
2005ರ ಡಿಸೆಂಬರ್‌ಗೂ ಮೊದಲು ಅರಣ್ಯದಲ್ಲಿ ನೆಲೆಸಿರುವ ಬುಡಕಟ್ಟು ಜನರಿಗೆ ಗರಿಷ್ಠ ನಾಲ್ಕು ಎಕರೆವರೆಗೆ ಜಮೀನು ನೀಡುವುದಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ. ಜೀವನೋಪಾಯಕ್ಕೆ ಅರಣ್ಯವನ್ನೇ ಅವಲಂಬಿಸಿರುವವರಿಗೆ ಈ ಅವಕಾಶ ಇದ್ದು, ಅದನ್ನು ತೀರ್ಮಾನಿಸುವ ಅಧಿಕಾರವನ್ನು ಗ್ರಾಮ ಸಮಿತಿಗಳಿಗೆ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.