ADVERTISEMENT

ಅರಳಿದ ಕಮಲ, ಚಿಗುರಿದ ಜೆಡಿಎಸ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2011, 7:05 IST
Last Updated 5 ಜನವರಿ 2011, 7:05 IST
ಅರಳಿದ ಕಮಲ, ಚಿಗುರಿದ ಜೆಡಿಎಸ್
ಅರಳಿದ ಕಮಲ, ಚಿಗುರಿದ ಜೆಡಿಎಸ್   

ಬೆಂಗಳೂರು: ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದ್ದು, ಒಟ್ಟು 30 ಜಿಲ್ಲಾ ಪಂಚಾಯಿತಿಗಳ ಪೈಕಿ 12ರಲ್ಲಿ ಸ್ಪಷ್ಟ ಬಹುಮತ ಗಳಿಸಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ನಾಲ್ಕು ಜಿಲ್ಲಾ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 10ರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕು ಪಂಚಾಯಿತಿಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, 176 ತಾಲ್ಲೂಕು ಪಂಚಾಯಿತಿಗಳ ಪೈಕಿ ಬಿಜೆಪಿ 68, ಕಾಂಗ್ರೆಸ್ 31 ಹಾಗೂ ಜೆಡಿಎಸ್ 29 ಕಡೆ ಜಯಗಳಿಸಿವೆ. ಉಳಿದ ತಾಲ್ಲೂಕು ಪಂಚಾಯಿತಿಗಳಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಪಕ್ಷೇತರ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೂ, ಪ್ರಭಾವಿ ಸಚಿವರು ಇರುವ ಜಿಲ್ಲೆಗಳಲ್ಲಿಯೇ ಆ ಪಕ್ಷಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಸತತವಾಗಿ ಸೋಲು ಕಾಣುತ್ತಿರುವ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಬಾರಿಯೂ ಹಿನ್ನಡೆ ಅನುಭವಿಸಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾದರೂ, ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ತುಂಬಲು ಸಾಧ್ಯವಾಗಿಲ್ಲ. ಜೆಡಿಎಸ್ ತನ್ನ ನೆಲೆ ಇರುವ ಹಳೆ ಮೈಸೂರು ಜಿಲ್ಲೆಗಳಲ್ಲಿ ಪ್ರಾಬಲ್ಯವನ್ನು ಮೆರೆದಿದೆ. ಹಾಗೆಯೇ ಅತಂತ್ರ ಫಲಿತಾಂಶ ಬಂದಿರುವ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲೂ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹ.

ದಕ್ಷಿಣ ಕನ್ನಡ, ಉಡುಪಿ, ಗದಗ, ಬಾಗಲಕೋಟೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಕೊಡಗು, ಬೀದರ್, ಹಾವೇರಿ, ಬೆಳಗಾವಿ, ದಾವಣಗೆರೆ ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಹಾಸನ, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲಾ ಪಂಚಾಯಿತಿಗಳು ಜೆಡಿಎಸ್ ಪಾಲಾಗಿದ್ದರೆ, ಚಿಕ್ಕಬಳ್ಳಾಪುರ, ಯಾದಗಿರಿ, ಉತ್ತರ ಕನ್ನಡ ಮತ್ತು ಚಾಮರಾಜನಗರ ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ.

ಅತಂತ್ರ ಸ್ಥಿತಿಯಲ್ಲಿರುವ 10 ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಒಂದು ವೇಳೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲೂ ಪಕ್ಷಾಂತರ ಪರ್ವ ಶುರುವಾದರೆ ಆಗ ಒಟ್ಟಾರೆ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಸುಮಾರು 15 ದಿನಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಬ್ಬರದ ಪ್ರಚಾರ ನಡೆಸಿದರೂ ಕೇವಲ 12 ಜಿಲ್ಲಾ ಪಂಚಾಯಿತಿಗಳಲ್ಲಿ ಮಾತ್ರ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ.

ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ತವರು ಜಿಲ್ಲೆಯಾದ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಪ್ರಯಾಸದಿಂದ ಸರಳ ಬಹುಮತ ಗಳಿಸಿದೆ. ಇಲ್ಲಿ ಒಟ್ಟು 31 ಕ್ಷೇತ್ರಗಳ ಪೈಕಿ ಬಿಜೆಪಿ 16, ಕಾಂಗ್ರೆಸ್ 13 ಮತ್ತು ಜೆಡಿಎಸ್ 2 ಸ್ಥಾನ ಗಳಿಸಿದೆ. ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಲ್ಲೂ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಚುನಾವಣೆಗೂ ಮುನ್ನ ಜಿಲ್ಲೆಯ ಪ್ರಭಾವಿ ನಾಯಕ ಎಸ್.ಬಂಗಾರಪ್ಪ ಅವರು ಜೆಡಿಎಸ್ ಸೇರಿದರೂ ಆ ಪಕ್ಷಕ್ಕೆ ಹೆಚ್ಚಿನ ಲಾಭವಾಗಿಲ್ಲ.

ರೆಡ್ಡಿ ಸಹೋದರರಿಗೆ ಈ ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆಯಾಗಿದೆ. ಬಳ್ಳಾರಿ ಜಿಲ್ಲಾ ಪಂಚಾಯಿತಿಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಪ್ರತಿನಿಧಿಸುವ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಕರುಣಾಕರ ರೆಡ್ಡಿ ಉಸ್ತುವಾರಿ ಸಚಿವರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಅಧ್ಯಕ್ಷರ ಜಿಲ್ಲೆಯಲ್ಲೇ ಸೋಲು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ತುಮಕೂರು ಜಿಲ್ಲೆ ಯಲ್ಲಿಯೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಕ್ಷೇತ್ರವಾದ ಶಿರಾ ತಾಲ್ಲೂಕು ಪಂಚಾಯಿತಿ ಜೆಡಿಎಸ್ ಪಾಲಾಗಿದೆ.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನಡೆ ಉಂಟು ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ತೆಕ್ಕಗೆ ಬಿದಿದ್ದು, ಇದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಕೈಬಲಪಡಿಸಿದೆ. ಇದೇ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಸಿಪಿಎಂ ಪಾಲಾಗಿದೆ.

ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ತ್ಯಜಿಸಿದ ಎಂ.ಸಿ.ಅಶ್ವತ್ಥ್ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ತಾಲ್ಲೂಕು ಪಂಚಾಯಿತಿಯಲ್ಲಿ ಜೆಡಿಎಸ್ 15 ಸ್ಥಾನಗಳನ್ನು, ಬಿಜೆಪಿ 4 ಸ್ಥಾನಗಳನ್ನು ಗಳಿಸಿದೆ. ಜಿಲ್ಲಾ ಪಂಚಾಯಿತಿಯ ಐದು ಕ್ಷೇತ್ರಗಳೂ ಜೆಡಿಎಸ್ ಪಾಲಾಗಿದ್ದು, ಅಶ್ವತ್ಥ್ ಮತ್ತು ಯೋಗೀಶ್ವರ್‌ಗೆ ಮುಖಭಂಗವಾಗಿದೆ.

ಅನರ್ಹರ ಕ್ಷೇತ್ರಗಳ ಸ್ಥಿತಿ: ಅನರ್ಹಗೊಂಡಿರುವ ಪಕ್ಷೇತರ ಶಾಸಕ ವೆಂಕಟರಮಣಪ್ಪ ಪ್ರತಿನಿಧಿಸುತ್ತಿದ್ದ ಪಾವಗಡ ತಾಲ್ಲೂಕು ಪಂಚಾಯಿತಿ ಜೆಡಿಎಸ್ ಪಾಲಾಗಿದೆ. ಇಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದ ವೆಂಕಟರಮಣಪ್ಪ ಬೆಂಬಲಿಗರಿಗೆ ಮುಖಭಂಗವಾಗಿದೆ. ಅವರ ಪುತ್ರ ಗೆದ್ದಿರುವುದು ಬಿಟ್ಟರೆ ಉಳಿದಂತೆ ಎಲ್ಲವೂ ಜೆಡಿಎಸ್ ಪಾಲಾಗಿದೆ. ಮಳವಳ್ಳಿ ತಾಲ್ಲೂಕು ಪಂಚಾಯಿತಿ ಕಾಂಗ್ರೆಸ್ ಪಾಲಾಗಿದ್ದು, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು. ಜಿಲ್ಲಾ ಪಂಚಾಯಿತಿಯ ಏಳು ಕ್ಷೇತ್ರಗಳಲ್ಲಿ ಐದು ಕಡೆ ಜೆಡಿಎಸ್ ಹಾಗೂ ಎರಡು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ.

ಮುನಿಯಪ್ಪಗೆ ಮುಖಭಂಗ: ಚಿಂತಾಮಣಿ ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು 15 ಕಡೆ ಜಯಗಳಿಸಿದ್ದು, 5 ಕಡೆ ಕಾಂಗ್ರೆಸ್ ಮತ್ತು ಒಂದು ಕಡೆ ಪಕ್ಷೇತರರು ಜಯಗಳಿಸಿದ್ದಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.

ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ಆಕ್ರೋಶಗೊಂಡಿದ್ದ  ಡಾ.ಎಂ.ಸಿ.ಸುಧಾಕರ್ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಸಚಿವ ಮುನಿಯಪ್ಪ ಅವರಿಗೆ ಇಲ್ಲಿ ತೀವ್ರ ಮುಖಭಂಗವಾಗಿದೆ. ಶಾಸಕ ಸುಧಾಕರ್ ಅವರು ತಮ್ಮ ಬಣದ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮುನಿಯಪ್ಪಗೆ ಸೆಡ್ಡು ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರ ತವರು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದೆ.

ಯಡಿಯೂರಪ್ಪ ಮತ್ತು ಅವರ ಸಂಪುಟದ ಸಚಿವರ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಮತ್ತು ಭೂ ಹಗರಣಗಳು ಆರೋಪಗಳು, ನಾಯಕತ್ವ ಬದಲಾವಣೆ ಬಗ್ಗೆ ಉಂಟಾದ ಗೊಂದಲದಿಂದಾಗಿ  ಈ ಚುನಾವಣೆ ಬಿಜೆಪಿಗೂ ಸತ್ವಪರೀಕ್ಷೆಯಾಗಿತ್ತು. ಹಗರಣಗಳು ಮತದಾರರ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಎಚ್ಚರಿಕೆಯ ಗಂಟೆಯನ್ನಂತೂ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.